ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನ ನನಗೆ ನೀಡಲಿ. ಬಿಜೆಪಿಯಲ್ಲೂ ಸಭಾಪತಿ ಸ್ಥಾನಕ್ಕೆ ಆಕಾಂಕ್ಷಿಗಳಿರಬಹುದು. ಆದರೆ ನಮ್ಮ ಬೆಂಬಲವಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಹೊರಟ್ಟಿ, ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದು, ಇದಕ್ಕೆ ನಮ್ಮ ಬೆಂಬಲವೂ ಇದೆ. ನಮಗೆ ಸಭಾಪತಿ ಸ್ಥಾನ ಕೊಡಬೇಕು. ನಾವೇನು ಸನ್ಯಾಸಿಗಳಲ್ಲ. ಹೊರಟ್ಟಿ ಸಭಾಪತಿ ಆಗಬೇಕು ಎಂದು ಜೆಡಿಎಸ್ ವರಿಷ್ಠರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸಭಾಪತಿ ಸ್ಥಾನ ಜೆಡಿಎಸ್ ಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭಾಪತಿ ಸ್ಥಾನ ಹೊರಟ್ಟಿಗೆ ಕೊಡಬೇಕು ಎಂದು ದೇವೇಗೌಡರೂ ಚರ್ಚೆ ನಡೆಸಿದ್ದಾರೆ. ಬಿಜೆಪಿಯಲ್ಲೂ ಆಕಾಂಕ್ಷಿಗಳಿರಬಹುದು. ನಾವು 31 ಜನರಿದ್ದೇವೆ. ನಮಗೆ ಸಭಾಪತಿ ಸ್ಥಾನ ಬೇಕು ಎಂದು ಹೇಳಬಹುದು. ಆದರೆ ನಾವು 14 ಸದಸ್ಯರಿದ್ದು, ಸರ್ಕಾರ ಏನೇ ಮಾಡಬೇಕೆಂದರೂ ನಮ್ಮ ಬೆಂಬಲವಿಲ್ಲದಿದ್ದರೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ನಾವು ಜನತಾ ಪರಿವಾರ ಒಗ್ಗೂಡಿಸಲು ಹೊರಟಿದ್ದೇವೆ. ಮಧುಬಂಗಾರಪ್ಪ, ಜಿಟಿಡಿ ಎಲ್ಲರನ್ನೂ ಮನವೊಲಿಕೆ ಮಾಡುತ್ತೇವೆ ಎಂದು ಇದೇ ವೇಳೆ ಹೇಳಿದ್ದಾರೆ.