ನವದೆಹಲಿ: ದೇಶಾದ್ಯಂತ ನಾಳೆಯಿಂದ ಕೊರೊನಾ ಲಸಿಕೆ ಡ್ರೈ ರನ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತಿ ರಾಜ್ಯದಲ್ಲಿ 3ರಿಂದ 5 ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಎಲೆಕ್ಷನ್ ಬೂತ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಹೇಗೆ ತರಬೇತಿ ನೀಡಲಾಗುವುದೋ ಅದೇ ಮಾದರಿಯಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯಲಿದೆ. ಪ್ರತಿಯೊಬ್ಬ ಆರೋಗ್ಯ ಸಿಬ್ಬಂದಿಗಳಿಗೂ ತರಬೇತಿ ನೀಡಲಾಗುತ್ತದೆ ಎಂದರು.
ಡ್ರೈ ರನ್ ಗಾಗಿ ರಾಷ್ಟ್ರ ಮಟ್ಟದಲ್ಲಿ 2000 ಮಾಸ್ಟರ್ ಟ್ರೈನರ್ಸ್ ಇರಲಿದ್ದು, 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತದೆ. ಇನ್ನು ರಾಜ್ಯದಲ್ಲಿ ಬೆಂಗಳೂರು, ಶಿವಮೊಗ್ಗ, ಮೈಸೂರು, ಕಲಬುರ್ಗಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಲಸಿಕೆ ಡ್ರೈ ರನ್ ನಡೆಯಲಿದ್ದು, ಬೆಂಗಳೂರಿನಲ್ಲಿ ಮೂರು ಕಡೆಗಳಲ್ಲಿ ಡ್ರೈ ರನ್ ಆರಂಭವಾಗಲಿದೆ.