ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಒಬ್ಬೊಬ್ಬರು ಸಚಿವರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಪ್ರತ್ಯೇಕ ಸಭೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚಟುವಟಿಕೆ ನಡೆಯುತ್ತಿರುವುದು ಶೇಕಡಾ ನೂರರಷ್ಟು ನಿಜ. ಕೆಲ ಸಚಿವರೇ ಪ್ರತ್ಯೇಕ ಸಭೆಯನ್ನೂ ನಡೆಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಚಿವ ನಿರಾಣಿ, ಪ್ರತ್ಯೇಕ ಸಭೆ ನಡೆಸುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಸಿಎಂ ಖುರ್ಚಿ ಖಾಲಿಯಿದ್ದರೆ ಈ ಬಗ್ಗೆ ಮಾತನಾಡಿದರೆ ಅರ್ಥವಿದೆ ಎಂದಿದ್ದಾರೆ.
ಸಿಎಂ ಯಡಿಯೂರಪ್ಪ ಇಳಿವಯಸ್ಸಿನಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸುತ್ತಿದ್ದಾರೆ. ಮುಂದಿನ ಎರಡು ವರ್ಷ ಅವರೇ ಮುಂದುವರಿಯಬೇಕು. ನಾಯಕತ್ವ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆ ಅದಕ್ಕೆ ನಾವು ಬದ್ಧ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ಕೊರೊನಾ ಸಂಕಷ್ಟದ ನಡುವೆ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತುತವಲ್ಲ. ಅಷ್ಟಕ್ಕೂ ಸಿಎಂ ಖುರ್ಚಿ ಖಾಲಿಯಿಲ್ಲ. ಅಂತಹ ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ನಾಯಕತ್ವ ಬದಲಾವಣೆ ಸುದ್ದಿ ಕೇವಲ ಊಹಾಪೋಹ. ಅಂತಹ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.