ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಯಾವುದೇ ವಿವಾದಗಳನ್ನು ಸೃಷ್ಟಿಸಿಕೊಳ್ಳಲೂ ಇಷ್ಟಪಡಲ್ಲ. ಆದರೂ ಯಾಕೋ ವಿವಾದಗಳು ನನ್ನ ಹಿಂದೆಯೇ ಬರುತ್ತಿವೆ ಎಂದು ಎಂ ಎಲ್ ಸಿ ಸಿ.ಪಿ. ಯೋಗೀಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೀಶ್ವರ್, ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಆಗಾಗ ಭೇಟಿಯಾಗುತ್ತೇನೆ. ಹಾಗೇ ಈಗಲೂ ಭೇಟಿಯಾಗಿದ್ದೇನೆ. ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ನನ್ನ ಪಾಡಿಗೆ ಇದ್ದೇನೆ. ಯಾವುದೇ ಒತ್ತಡ ಹಾಕಿಲ್ಲ. ಪಕ್ಷ ಈಗಾಗಲೇ ವಿಧಾನ ಪರಿಷತ್ ಗೆ ನನ್ನನ್ನು ಆಯ್ಕೆ ಮಾಡಿದೆ. ಅವರಾಗಿಯೇ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ. ಸಚಿವ ಸ್ಥಾನ ನೀಡಿಲ್ಲ ಎಂದರೂ ತೊಂದರೆಯಿಲ್ಲ ಎಂದು ಹೇಳಿದರು.
ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ ಯೋಗೀಶ್ವರ್, ರಾಜ್ಯದ ಸಿಎಂ ಆಗಬೇಕು ಎಂದು ಜನ ಬಯಸಿದರೂ ಕುಮಾರಸ್ವಾಮಿಯವರಿಗೆ ಸಿಎಂ ಸ್ಥಾನ ಉಳಿಸಿಕೊಳ್ಳಲು ಆಗಿಲ್ಲ. ಅಧಿಕಾರ ಕಳೆದುಕೊಂಡಿದ್ದಾರೆ, ಸಾಕಷ್ಟು ನೊಂದಿದ್ದಾರೆ. ಅವರನ್ನು ಇನ್ನಷ್ಟು ನೋಯಿಸುವುದು ಸರಿಯಲ್ಲ. ಪಾಪ ಸಿಎಂ ಭೇಟಿಗೆ ಅಂತ ಬರ್ತಾರೆ. ಏನೋ ಕೆಲಸ ಮಾಡಿಸಿಕೊಂಡು ಹೋಗ್ತಾರೆ ಎಂದರು.