ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಮುಂದುವರೆದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಆರಂಭವಾಗಿದ್ದು, ಬಸವ ಜಯಮೃತುಂಜಯ ಸ್ವಾಮೀಜಿ ಶಾಸಕ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್ ಕಪಿಮುಷ್ಠಿಯಲ್ಲಿದ್ದಾರೆ ಎಂಬ ಸಚಿವ ಸಿ.ಸಿ.ಪಾಟೀಲ್ ಆರೋಪಕ್ಕೆ ತಿರುಗೇಟು ನೀಡಿರುವ ಸ್ವಾಮೀಜಿ ನಾನು ಭಕ್ತರ ಕಪಿಮುಷ್ಠಿಯಲ್ಲಿದ್ದೇನೆ ಹೊರತು ಯಾವುದೇ ನಾಯಕನ ಕಪಿಮುಷ್ಠಿಯಲ್ಲಿಲ್ಲ ಎಂದಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ನಾನು ಡ್ರೈವರ್, ವಿಜಯಾನಂದ ಕಾಶಪ್ಪನವರ್ ಕಂಡಕ್ಟರ್. ಶಾಸಕ ಯತ್ನಾಳ್ ಸ್ಟೇಷನ್ ಮಾಸ್ಟರ್. ಯತ್ನಾಳ್ ಹಾಗೂ ಕಾಶಪ್ಪನವರ್ ನನ್ನ ದಾರಿ ತಪ್ಪಿಸುತ್ತಿಲ್ಲ. ಅವರಿಬ್ಬರೂ ಸಮುದಾಯದ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.
ನಾನು ಯಾವುದೇ ನಾಯಕರ ಕಪಿಮುಷ್ಠಿಯಲ್ಲಿಲ್ಲ. ನಿನ್ನೆ ನಡೆದ ಸಮಾವೇಶದಲ್ಲಿ ಯತ್ನಾಳ್ ಅವರಿಗೆ ಯಾವುದೇ ರಾಜಕೀಯ ಹೇಳಿಕೆ ನೀಡಬೇಡಿ ಎಂದು ನಾನು ಹೇಳಿದ್ದೆ. ಆದರೆ ಅವರು ಆಕ್ರೋಶದ ಭರದಲ್ಲಿ ಕೆಲವು ಮಾತುಗಳನ್ನು ಆಡಿದ್ದಾರೆ. ಅವರು ನೀಡಿದ ಹೇಳಿಕೆಗಳಿಗೂ ನಮ್ಮ ಹೋರಾಟಕ್ಕೂ ಸಂಬಂಧವಿಲ್ಲ. ಮೀಸಲಾತಿ ಹೋರಾಟದ ವಿಚಾರದಲ್ಲಿ ನಾವು ಮಾತುಕತೆಗೆ ಸಿದ್ಧ. ಆದರೆ ನಾನು ವಿಧಾನಸೌಧಕ್ಕಾಗಲಿ, ಸಿಎಂ ನಿವಾಸ ಕಾವೇರಿಗಾಗಲಿ ಬರುವುದಿಲ್ಲ. ಸರ್ಕಾರವೇ ಫ್ರೀಂಡ ಪಾರ್ಕ್ ಗೆ ಬರಲಿ ಎಂದು ಹೇಳಿದರು.