ಮಹಾಮಾರಿ ಕೊರೊನಾ ಕಾರಣಕ್ಕೆ ಕಳೆದ ಎಂಟು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಒಂದೊಂದಾಗಿ ತೆರೆಯುತ್ತಿವೆ. ಪದವಿ, ಸ್ನಾತಕೋತ್ತರ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ಮೊದಲೇ ತರಗತಿಗಳು ಆರಂಭವಾಗಿದ್ದು, ಜನವರಿ 1 ರಿಂದ 10 ಹಾಗೂ 12 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಾಲಾ – ಕಾಲೇಜು ಆರಂಭವಾಗಿದೆ.
ಇದರ ಜೊತೆಗೆ ವಿದ್ಯಾಗಮ ಸಹ ನಡೆಯುತ್ತಿದ್ದು, ಕೊರೊನಾ ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ತರಗತಿಗಳು ಆರಂಭವಾದ ಮೊದಲ ದಿನ ಹಾಜರಾತಿ ಕಡಿಮೆಯಾಗಿತ್ತಾದರೂ ಈಗ ದಿನದಿನಕ್ಕೂ ಹಾಜರಾತಿ ಹೆಚ್ಚಳವಾಗುತ್ತಿರುವುದು ಶಾಲಾ ಆಡಳಿತ ಮಂಡಳಿ ಹಾಗೂ ಅಧ್ಯಾಪಕರಲ್ಲಿ ಸಂತಸ ತಂದಿದೆ.
ಆನ್ಲೈನ್ ತರಗತಿಗಳು ಸಹ ನಡೆಯುತ್ತಿದ್ದು, ಆದರೆ ವಿದ್ಯಾರ್ಥಿಗಳು ಆಫ್ಲೈನ್ ತರಗತಿಯತ್ತ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದರ ಮಧ್ಯೆ ಕೆಲ ಅಧ್ಯಾಪಕರಿಗೆ ಕೊರೊನಾ ಸೋಂಕು ತಗುಲಿರುವುದು ಆತಂಕಕ್ಕೆಡೆ ಮಾಡಿದ್ದು, ಆದರೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ತರಗತಿಗಳನ್ನು ನಡೆಸಿಕೊಂಡು ಹೋಗುವ ವಿಶ್ವಾಸ ಸರ್ಕಾರದ್ದಾಗಿದೆ. ಮುಂದಿನ ದಿನಗಳಲ್ಲಿ ಇತರೆ ತರಗತಿ ವಿದ್ಯಾರ್ಥಿಗಳಿಗೂ ಶಾಲಾ – ಕಾಲೇಜು ಆರಂಭವಾಗುವ ಸಾಧ್ಯತೆ ಇದೆ.