ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೆದ್ದಾರಿ ತಡೆ ಪ್ರತಿಭಟನೆ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾವಿರಾರು ರೈತರು ಗುಂಪು ಗುಂಪಾಗಿ ಹೆದ್ದಾರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಪ್ಪಳ, ಹುಬ್ಬಳ್ಳಿ, ರಾಯಚೂರು ಬೆಳಗಾವಿ, ಬೀದರ್, ಬಾಗಲಕೋಟೆ, ದಾವಣಗೆರೆ, ತುಮಕೂರು ಸೇರಿದಂತೆ ರಾಜ್ಯದ ಎಲ್ಲೆಡೆಗಳಲ್ಲಿ ಹೆದ್ದಾರಿಗಳನ್ನು ತಡೆದಿರುವ ರೈತರು ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಹಲವೆಡೆಗಳಲ್ಲಿ ರೈತ ಮಹಿಳೆಯರು ರಸ್ತೆಯಲ್ಲಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿಗೆ ಲಗ್ಗೆಯಿಟ್ಟ ಅನ್ನದಾತರು – ರಾಜ್ಯದ ಹಲವೆಡೆಗಳಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ
ರಾಮನಗರದಲ್ಲಿ ರೈತರು ಹೆದ್ದಾರಿ ತಡೆದು ರಸ್ತೆಯಲ್ಲಿಯೇ ತರಕಾರಿ ಹೆಚ್ಚಿ, ಅಡುಗೆ ಮಾಡಿ ಪ್ರತಿಭಟಿಸಿದರೆ, ಹಾವೇರಿಯಲ್ಲಿ ರೈತರು ರಸ್ತೆಯಲ್ಲಿ ಸಂಗೀತ ಹಾಡಿ, ವಾದ್ಯಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಂಗಳೂರಿನ ಯಲಹಂಕ, ಸಾದಹಳ್ಳಿ, ತುಮಕೂರು, ಕೊಪ್ಪಳ, ಬೆಳಗಾವಿ ಸೇರಿದಂತೆ ಹಲವೆಡೆ ರಸ್ತೆ ತಡೆ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.