ಬೆಂಗಳೂರು: ಏಕಪತ್ನಿ ವ್ರತಸ್ಥ ಹೇಳಿಕೆ ಹಾಗೂ 225 ಶಾಸಕರ ವಿರುದ್ಧ ತನಿಖೆಯಾಗಬೇಕು ಎಂಬ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸಚಿವ ಸುಧಾಕರ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಕಿಡಿ ಹೊತ್ತಿಸಿತ್ತಲ್ಲದೇ ರಾಜಕೀಯ ನಾಯಕರ ಆಕ್ರೋಶಕ್ಕೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಟ್ವಿಟ್ ಮಾಡಿರುವ ಸಚಿವರು, ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ.
ಹೀಗಾಗಿ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ 17 ಜನರ ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.