ಬೆಳಗಾವಿ: ಪಡಿತರ ಅಕ್ಕಿ ಕಡಿಮೆ ನೀಡುತ್ತಿರುವುದನ್ನು ಪ್ರಶ್ನಿಸಿದ ವ್ಯಕ್ತಿಗೆ ಸತ್ತು ಹೋಗು ಎಂದು ಹೇಳಿದ್ದ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸಚಿವರು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು ಪಡಿತರ ಯೋಜನೆ ಏನು ಇದೆ ಅದನ್ನು ನಾನು ಆತನಿಗೆ ವಿವರಿಸಿದೆ. ಕರೆ ಮಾಡಿದ ವ್ಯಕ್ತಿ ಹಾಗಾದರೆ ನಾವು ಸಾಯುವುದಾ ಎಂದು ಕೇಳಿದ ಸತ್ತರೆ ಒಳ್ಳೇದು ಎಂದೆ ಅಷ್ಟೆ. ಅದಕ್ಕಿಂತ ಇನೇನು ಹೇಳಲಿ ಎಂದು ಕೇಳಿದ್ದಾರೆ.
ವ್ಯಕ್ತಿಯೊಬ್ಬ ಆಹಾರ ಸಚಿವ ಉಮೇಶ್ ಕತ್ತಿಯವರಿಗೆ ಕರೆ ಮಾಡಿ ಲಾಕ್ ಡೌನ್ ಸಂದರ್ಭದಲ್ಲೂ ಕೇವಲ 2 ಕೆ.ಜಿ ಪಡಿತರ ಅಕ್ಕಿ ಕೊಡುತ್ತೀದ್ದೀರಾ ಇಷ್ಟು ಕಡಿಮೆ ಅಕ್ಕಿಯಲ್ಲಿ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರಿಸಿದ ಆಹಾರ ಸಚಿವರು 2 ಕೆ.ಜಿ ಅಕ್ಕಿ, 3ಕೆಜಿ ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡುತ್ತಿದ್ದೇವೆ. ಮೇ, ಜೂನ್ ತಿಂಗಳಿಂದ ಕೇಂದ್ರ ಸರ್ಕಾರದಿಂದ 5 ಕೆ.ಜಿ ಪಡಿತರ ನೀಡಲಾಗುವುದು ಎಂದು ಸಮಜಾಯಿಷಿ ನೀಡಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವ್ಯಕ್ತಿ ಉತ್ತರ ಕರ್ನಾಟಕ ಭಾಗಕ್ಕೆ ಏನು 2 ಕೆಜಿ ಅಕ್ಕಿ ಬಿಟ್ಟರೆ ಏನೂ ಸಿಗುತ್ತಿಲ್ಲ. ಲಾಕ್ ಡೌನ್ ನಿಂದಾಗಿ ಈಗಾಗಲೇ ಕೆಲಸವೂ ಇಲ್ಲ, ಊಟಕ್ಕೂ ಇಲ್ಲ. ಮುಂದಿನ ತಿಂಗಳವರೆಗೆ ನಾವೇನು ಸಾಯಬೇಕೆ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಸಚಿವರು ಸತ್ತರೆ ಒಳ್ಳೆಯದು ಎಂದು ಹೇಳಿದ್ದಾರೆ.