ಶಿವಮೊಗ್ಗ: ರಾಜ್ಯದ ಹಲವೆಡೆಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಿ. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬೇಬಿ ಬೆಟ್ಟದ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಕೆ ಆರ್ ಎಸ್ ಡ್ಯಾಂ ಗೆ ಸಮಸ್ಯೆಯಾಗುತ್ತದೆ. ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಇಲ್ಲವಾದಲ್ಲಿ ಕೆ ಆರ್ ಎಸ್ ಜಲಾಶಯಕ್ಕೆ ದೊಡ್ಡಮಟ್ಟದಲ್ಲಿ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದರು.
ಇನ್ನು ನಾನು ಅಕ್ರಮ ಗಣಿಗಾರಿಕೆ ಸಕ್ರಮ ಮಾಡುವುದಾಗಿ ಹೇಳಿಲ್ಲ. ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ಹೇಳಿದ್ದೇನೆ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತಿದ್ದರೆ ಅದನ್ನು ನಿಲ್ಲಿಸಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ. ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯವೆನಿಸಿದರೆ ಲೈಸೆನ್ಸ್ ಮೂಲಕ ಅನುಮತಿ ನೀಡುತ್ತಾರೆ. ಹೀಗಿದ್ದೂ ಅಕ್ರಮ ಗಣಿಗಾರಿಕೆ ನಡೆದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದರು.