ಬೆಂಗಳೂರು: ಸಿಐಡಿ ಡಿ.ವೈ.ಎಸ್.ಪಿ. ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸ್ ಇಲಾಖೆಗೆ ಆಘಾತವನ್ನುಂಟುಮಾಡಿದೆ. ಆತ್ಮಹತ್ಯೆಗೆ ಕಾರಣವೇನಿರಬಹುದು? ರಾಜಕೀಯ ಒತ್ತಡವೇ, ಕೌಟುಂಬಿಕ ಸಮಸ್ಯೆಯೇ, ಕೆಲಸದ ಒತ್ತಡವೇ? ಹೀಗೆ ಹಲವಾರು ಅನುಮಾನ, ಚರ್ಚೆಗಳು ಆರಂಭವಾಗಿವೆ. ಆದರೆ ಡಿ.ವೈ.ಎಸ್.ಪಿ. ಆತ್ಮಹತ್ಯೆಗೆ ಇದಾವುದೂ ಕಾರಣವಲ್ಲ ಅವರನ್ನು ಕಾಡುತ್ತಿದ್ದ ಅತಿಯಾದ ಡಿಪ್ರೆಶನ್ ಕಾರಣ ಎನ್ನಲಾಗಿದೆ.
ಹೌದು. ಸಿಐಡಿ ಡಿ.ವೈ.ಎಸ್.ಪಿ. ಲಕ್ಷ್ಮಿ ಆತ್ಮಹತ್ಯೆಗೆ ಅತಿಯಾದ ಖಿನ್ನತೆಯೇ ಕಾರಣ ಎನ್ನಲಾಗಿದೆ. ಡಿ.ವೈ.ಎಸ್.ಪಿ. ಲಕ್ಷ್ಮಿಯವರಿಗೆ ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಿರಲಿಲ್ಲ. ಪತಿ ಅಮೇಜಾನ್ ನಲ್ಲಿ ಕೆಲಸ ಮಾಡುತಿದ್ದು, ಹೈದರಾಬಾದ್ ನಲ್ಲಿ ವಾಸವಾಗಿದ್ದರು. ತನಗೆ ಮಕ್ಕಳಿಲ್ಲ ಎಂಬುದೇ ಲಕ್ಷ್ಮೀ ಅವರ ಕೊರಗಿಗೆ ಕಾರಣವಾಗಿತ್ತು.
ಡಿ.ವೈ.ಎಸ್.ಪಿ. ಲಕ್ಷ್ಮಿ ಅತಿಯಾದ ಖಿನ್ನತೆಯಿಂದ ಡ್ರಿಂಕ್ಸ್ ಸೇವನೆ ಅಭ್ಯಾಸ ಮಾಡಿಕೊಂಡಿದ್ದರು. ಅಲ್ಲದೇ ವೈದ್ಯರ ಬಳಿ ಕೌನ್ಸೆಲಿಂಗ್ ಕೂಡ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಮಾನಸಿಕ ಒತ್ತಡದಿಂದಾಗಿ ಲಕ್ಷ್ಮಿ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಬಾರಿ ಸ್ನೇಹಿತನ ಮನೆಯಲ್ಲಿ ಎಲ್ಲರೂ ಪಾರ್ಟಿ ಮಾಡುತ್ತಿದ್ದ ವೇಳೆಯೇ ಏಕಾಏಕಿ ರೂಮಿಗೆ ಎದ್ದುಹೋದ ಲಕ್ಷ್ಮಿ ಅಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಖಿನ್ನತೆ, ಮಾನಸಿಕ ಒತ್ತಡ ಎಂಬುದು ಎಂಥವರನ್ನಾದರೂ ಬಲಿ ಪಡೆಯುತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.