ಚನ್ನಪಟ್ಟಣದ ಗೊಂಬೆಗಳು ವಿಶ್ವ ವಿಖ್ಯಾತಿ ಪಡೆದಿವೆ. ಇವುಗಳ ಅಂದ ಚಂದಕ್ಕೆ ಮಾರುಹೋಗದವರಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸಹ ತಮ್ಮ ‘ಮನ್ ಕೀ ಬಾತ್’ ನಲ್ಲಿ ಚನ್ನಪಟ್ಟಣದ ಗೊಂಬೆಗಳು ಕುರಿತು ಪ್ರಸ್ತಾಪ ಮಾಡಿದ್ದರು. ಅಲ್ಲದೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಊರುಗಳಿಗೆ ವಲಸೆ ಕಾರ್ಮಿಕರು ಹೊರಟ ಸಂದರ್ಭದಲ್ಲಿ ಅವರ ಮಕ್ಕಳಿಗಾಗಿ ರೈಲ್ವೆ ಇಲಾಖೆ, ನಿಲ್ದಾಣಗಳಲ್ಲಿ ಚನ್ನಪಟ್ಟಣದ ಗೊಂಬೆಗಳನ್ನು ನೀಡುವ ಮೂಲಕ ಅವರುಗಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.
ಇದೀಗ ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಭಾರತೀಯ ಅಂಚೆ ಇಲಾಖೆ ಮುಂದಾಗಿದೆ. ಇದಕ್ಕಾಗಿ ‘ಪ್ಯಾಕೇಜಿಂಗ್ ಪಾರ್ಸೆಲ್’ ಎಂಬ ವಿನೂತನ ಸೇವೆಯನ್ನು ಆರಂಭಿಸಲಾಗಿದ್ದು, ಇದರ ಮೂಲಕ ಚನ್ನಪಟ್ಟಣದ ಸ್ಥಳೀಯ ಬೊಂಬೆ ತಯಾರಕರು ನೇರವಾಗಿ ದೇಶ-ವಿದೇಶಗಳ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಹೊರೆ ಇಲ್ಲದೆ ತಲುಪಿಸಬಹುದಾಗಿದೆ. ಅಂಚೆ ಇಲಾಖೆಯ ಈ ಹೊಸ ಸೇವೆಯಿಂದಾಗಿ ಗೊಂಬೆ ತಯಾರಿಕೆಯನ್ನೇ ಜೀವನಾಧಾರವಾಗಿಸಿಕೊಂಡ ಕುಶಲಕರ್ಮಿಗಳಿಗೆ ಅನುಕೂಲವಾಗಲಿದೆ.
ಪ್ರವಾಸೋದ್ಯಮದಲ್ಲಿ ಹೂಡಿಕಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ
ಅಂತರಾಷ್ಟ್ರೀಯ ವರ್ತಕರು ಹಾಗೂ ಗ್ರಾಹಕರು ನೇರವಾಗಿ ಗೊಂಬೆ ತಯಾರಕರ ಇಮೇಲ್ ವಿಳಾಸಕ್ಕೆ ತಮಗೆ ಬೇಕಾದ ಗೊಂಬೆಗಳಿಗಾಗಿ ಬೇಡಿಕೆ ಸಲ್ಲಿಸಿದರೆ, ಗೊಂಬೆ ತಯಾರಿಕರು ಅಂಚೆ ಇಲಾಖೆಯ ನೆರವಿನಿಂದ ಇವುಗಳನ್ನು ಕಳುಹಿಸಬಹುದಾಗಿದೆ. ಇದಕ್ಕೂ ಮುನ್ನ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ವಿದೇಶಿ ಸೇವಾ ಅಂಚೆ ಕಚೇರಿ ಸಂಪರ್ಕಿಸುವ ಮೂಲಕ ವ್ಯಾಪಾರ ಸುಂಕದ ಪರವಾನಿಗೆ ಪಡೆದುಕೊಳ್ಳಬೇಕಾಗುತ್ತದೆ.