ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದ ತತ್ತರಿಸಿಹೋಗಿದೆ. ಇತರ ಜಿಲ್ಲೆಗಳಲ್ಲೂ ಸಹ ಮಹಾಮಾರಿ ವ್ಯಾಪಕವಾಗತೊಡಗಿದ್ದು, ಈ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಇದರ ಮಧ್ಯೆಯೂ ಭದ್ರಾವತಿ ನಗರಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸೇರಿದಂತೆ ಒಟ್ಟು ಒಂಬತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಪ್ರಸ್ತುತ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಈ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ಸಿ. ರೆಡ್ಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಕೊರೊನಾ ಮೊದಲನೇ ಅಲೆ ಆರಂಭವಾದಾಗಿನಿಂದಲೂ ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾ ಮಾಡಿದೆ.