ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದಾರೆ. ಈ ದುರಂತ ವೇದನೆ ತಂದಿದೆ. ಆದರೆ ಎಲ್ಲರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿರುವುದು ರಾತ್ರಿ 2 ಗಂಟೆಯಿಂದ. ಆದರೆ 24 ಗಂಟೆಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದಾರೆ. ಹಾಗಾಗಿ ಎಲ್ಲರೂ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ. ಮೃತರ ಡೆತ್ ರಿಪೋರ್ಟ್ ನೀಡುವಂತೆ ವೈದ್ಯರಿಗೆ ಕೇಳಿದ್ದೇವೆ. ವರದಿ ನೋಡಿದ ಬಳಿಕ ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂಬುದು ತಿಳಿಯಲಿದೆ ಎಂದರು.
ಚಾಮರಾಜನಗರ ಆಸ್ಪತ್ರೆಯಲ್ಲಿ 22ರೋಗಿಗಳ ಸಾವು; ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದೇನು ಗೊತ್ತಾ…?
ಸುಮಾರು 80 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದೇವೆ. 6,000 ಲೀಟರ್ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ ಮಾಡಿದ್ದೇವೆ. ಆದರೆ ಆಕ್ಸಿಜನ್ ಸಮಯಕ್ಕೆ ಬರದೇ ಸಮಸ್ಯೆಯಾಗಿದೆ. ನಮಗೆ ಮೈಸೂರಿನಿಂದ ಆಕ್ಸಿಜನ್ ಬರಬೇಕಿತ್ತು. ಆದರೆ ಅಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಅಲ್ಲಿಯೂ ಸಮಸ್ಯೆಯಿದೆ ಎಂಬ ಕಾರಣಕ್ಕೆ ನಮ್ಮ ಜಿಲ್ಲೆಗೆ ಆಕ್ಸಿಜನ್ ಪೂರೈಸದಿರುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಈ ದುರಂತ ವೈದ್ಯರ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.