ಬೆಂಗಳೂರು: ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ಕಾರಿನ ಗಾಜು ಪುಡಿ ಪುಡಿ ಮಾಡಿರುವ ರಮೇಶ್ ಜಾರಕಿಹೊಳಿ ಬೆಂಬಲಿಗರ ವರ್ತನೆಗೆ ಕಿಡಿ ಕಾರಿರುವ ರಾಜ್ಯ ಕಾಂಗ್ರೆಸ್, ಚಂಬಲ್ ಕಣಿವೆ ಡಕಾಯಿತರಂತೆ ರಮೇಶ್ ಜಾರಕಿಹೊಳಿ ಗೂಂಡಾಪಡೆ ವರ್ತನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಕಾಲು ಮುರಿದು ಮೂಲೆಯಲ್ಲಿ ಕುಳಿತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ವಿರೋಧ ಪಕ್ಷದ ಅಧ್ಯಕ್ಷರೊಬ್ಬರ ಎದುರು ಚಂಬಲ್ ಕಣಿವೆಯ ಡಕಾಯಿತರಂತೆ ವರ್ತಿಸುತ್ತಿದೆ ರಮೇಶ್ ಜಾರಕಿಹೊಳಿಯ ಗೂಂಡಾಪಡೆ. ಗೃಹ ಸಚಿವರಾದ ಬೊಮ್ಮಾಯಿಯವರೇ ನೀವು ಅತ್ಯಾಚಾರಿಯ ಈ ನಾಟಕ ನೋಡಿ ಮಜಾ ಅನುಭವಿಸುತ್ತಾ ಕುಳಿತಿದ್ದೀರಾ? ಎಂದು ಪ್ರಶಿಸಿದೆ.
ಸಿಡಿ ಪ್ರಕರಣ: ನಟ ಜಗ್ಗೇಶ್ ಖಡಕ್ ಪ್ರತಿಕ್ರಿಯೆ
ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಸರ್ಕಾರಕ್ಕೆ ಬೆದರಿಕೆ ಹಾಕಿ, ಪುಂಡ ಪೋಕರಿಗಳಿಗೆ ಹಣ ಕೊಟ್ಟು ದಾಂಧಲೆ ಎಬ್ಬಿಸಿದಾಕ್ಷಣ ಅತ್ಯಾಚಾರಿ ಸದಾಚಾರಿಯಾಗಿ ಬದಲಾಗುವುದಿಲ್ಲ. ಆರೋಪಿಯನ್ನು ಬಂಧಿಸದೇ ಕಲ್ಲೆಸೆದು, ದಾಂಧಲೆ ಎಬ್ಬಿಸುವ ಭಯೋತ್ಪಾದಕ ಕೃತ್ಯವೆಸಗಲು ಕಳಿಸಿದ್ದೀರಾ? ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಕೇಳಿದೆ.
ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯ, ಪೊಲೀಸರ ಕಳಪೆ ಕಾರ್ಯಕ್ಷಮತೆ ಈ ಸಿಡಿ ಪ್ರಕರಣದಲ್ಲಿ ಬಯಲಾಗಿದೆ. ದೂರು ದಾಖಲಾಗಿದ್ದರೂ ಅತ್ಯಾಚಾರ ಆರೋಪಿಯನ್ನು ಬಂಧಿಸದೆ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಶೋಷಣೆಗೆ ಒಳಪಟ್ಟ ಸಾಮಾನ್ಯ ಹೆಣ್ಣು ಮಗಳನ್ನು ಪತ್ತೆಹಚ್ಚಿ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ರಮೇಶ್ ಜಾರಕಿಹೊಳಿಯ ಚಡ್ಡಿಯ ಲಾಡಿಯೂ ಸಡಿಲ, ನಾಲಿಗೆಯೂ ಸಡಿಲ, ಬುದ್ದಿಯೂ ಸಡಿಲ ಎನ್ನುವುದನ್ನ ಜಗತ್ತು ನೋಡಿದೆ. ರಾಜ್ಯದ ಮರ್ಯಾದೆ ದಿನದಿನಕ್ಕೂ ಕುಸಿಯುತ್ತಿದೆ. ಹೀಗಿದ್ದರೂ ಅತ್ಯಾಚಾರಿ ಆರೋಪಿಯನ್ನು ಗೂಳಿಯಂತೆ ತಿರುಗಲು ಬಿಟ್ಟಿದ್ದು ಸರ್ಕಾರದ ನೀಚತನವೋ ಅಥವಾ ಪೊಲೀಸರ ಹೇಡಿತನವೋ ಎಂಬುದನ್ನು ಗೃಹ ಸಚಿವರೇ ಉತ್ತರಿಸಬೇಕು ಎಂದು ವಾಗ್ದಾಳಿ ನಡೆಸಿದೆ.