ಬೆಳಗಾವಿ: ಕೊರೊನಾ 2ನೇ ಅಲೆ ನಿರೀಕ್ಷೆಗೂ ಮೀರಿ ವೇಗವಾಗಿ ಹರಡುತ್ತಿದ್ದು, ಇಲ್ಲೊಂದು ಗ್ರಾಮದ ಅರ್ಧಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯ ಪುಟ್ಟಗ್ರಾಮ ಅಬನಾಳಿ ಗ್ರಾಮದಲ್ಲಿ ಬರೋಬ್ಬರಿ 146 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ.
ಅಬನಾಳಿ ಗ್ರಾಮದಲ್ಲಿ ಸುಮಾರು 300ರಷ್ಟು ಜನರಿದ್ದು, ಅವರಲ್ಲಿ 249 ಜನರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ 146 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಈ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಸಾತೇರಿ ದೇವಿ ಜಾತ್ರೆ ನಡೆದಿತ್ತು. ಜಾತ್ರೆ ಅಂಗವಾಗಿ ನಾಟಕ ಪ್ರದರ್ಶನ ಏರ್ಪಡಿಸಿದ್ದರಿಂದ ಊರಿನ ಜನರೆಲ್ಲರೂ ನಾಟಕ ಪ್ರದರ್ಶನ ವೀಕ್ಷಿಸಿದ್ದರು. ಅಲ್ಲದೇ ವಲಸೆ ಹೋಗಿದ್ದ ಕಾರ್ಮಿಕರು ಜಾತ್ರೆ ಸಂದರ್ಭದಲ್ಲಿ ಗ್ರಾಮಕ್ಕೆ ಆಗಮಿಸಿದ್ದರು. ಇದು ಇಡೀ ಗ್ರಾಮದಲ್ಲಿ ಮಹಾಮಾರಿ ಹರಡಲು ಕಾರಣವಾಗಿದೆ.
ಇದೀಗ ಮುಂಜಾಗೃತಾ ಕ್ರಮವಾಗಿ ಅಧಿಕಾರಿಗಳು ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ.