ಬೆಂಗಳೂರು: ಡಿಸಿಎಂ ಹುದ್ದೆ ನಿರೀಕ್ಷೆಯಲ್ಲಿದ್ದ ಸಚಿವ ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿಂಪಡೆದು, ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ಖಾತೆ ಬದಲಾವಣೆಯಿಂದ ಆಪ್ತರ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶ್ರೀರಾಮುಲು ಪರೋಕ್ಷವಾಗಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲು, ಹಲವು ದಿನಗಳಿಂದ ತಾವು ಡಿಸಿಎಂ ಹುದ್ದೆ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಾ ಬಂದಿದ್ದರು. ಆದರೆ ಇದೀಗ ಅವರ ಬಳಿಯಿದ್ದ ಪ್ರಮುಖ ಖಾತೆಯನ್ನು ಹಿಂಪಡೆದು ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನೀಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಯಡಿಯೂರಪ್ಪ ನಿರ್ಧಾರದಿಂದ ಸಿಡಿದೆದ್ದ ಶ್ರೀರಾಮುಲು ಇದೀಗ ಹೈಕಮಾಂಡ್ ಭೇಟಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈಗ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಖಾತೆ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ. ಆದರೆ ಈ ಖಾತೆ ನಿರ್ವಹಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಈ ಹಿಂದೆ ಆರೋಗ್ಯ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಹಾಗೇ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸಲು ನನಗೆ ಮುಕ್ತ ಅವಕಾಶ ನೀಡಬೇಕು. ಇಲ್ಲವಾದಲ್ಲಿ ನಾನು ಶಾಸಕನಾಗಿ ಇರುವುದು ಉತ್ತಮ. ಖಾತೆ ನಿರ್ವಹಣೆಗೆ ಸರಿಯಾಗಿ ಅವಕಾಶ ನೀಡದೇ ಹಸ್ತಕ್ಷೇಪ ಮಾಡುವುದಾದರೆ ನಾನು ಸಚಿವನಾಗಿರುವುದಕ್ಕಿಂತ ಶಾಸಕನಾಗಿ ಇರುವುದು ಒಳಿತು ಎಂದು ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಖಾತೆ ಬದಲಾವಣೆ ಬೆನ್ನಲ್ಲೇ ಸಚಿವ ಶ್ರೀರಾಮುಲು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಇದಕ್ಕಾಗಿ ಖಾಸಗಿ ಕಾರಿನಲ್ಲಿ ಆಗಮಿಸಿರುವುದು ಕುತೂಹಲ ಮೂಡಿಸಿದೆ. ಖಾತೆ ಬದಲಾವಣೆಯಿಂದ ತೀವ್ರ ಅಸಮಾಧಾನಗೊಂಡಿರುವ ಶ್ರೀರಾಮುಲು, ಹೈಕಮಾಂಡ್ ಭೇಟಿಗೆ ನಿರ್ಧರಿಸಿದ್ದು, ವರಿಷ್ಠರ ಭೇಟಿ ಬಳಿಕ ರಾಜೀನಾಮೆ ನೀಡಲು ಮುಂದಾಗುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.