ಬೆಂಗಳೂರು: ಕೋವಿಡ್ ಟೆಸ್ಟ್ ನಿರಾಕರಿಸಿ, ಆರೋಗ್ಯಾಧಿಕಾರಿಗಳನ್ನು ವಾಪಸ್ ಕಳುಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೇ ಬಾಯಿಗೆ ಬಂದಂತೆ ಮಾತನಾಡಿರುವುದು ಡಿಕೆಶಿ ಕಲ್ಚರ್ ನ್ನು ತೋರಿಸುತ್ತದೆ ಎಂದಿದ್ದಾರೆ.
ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರ ಕಳುಹಿಸಿದ್ದ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ನನ್ನನ್ನು ನೋಡಿದರೆ ಕೊರೊನಾ ಲಕ್ಷಣಗಳು ಇದೆ ಅನಿಸುತ್ತಿದೆಯೇ ? ನನಗೆ ಕೋವಿಡ್ ಟೆಸ್ಟು ಬೇಡಾ, ಯಾವ ಟೆಸ್ಟೂ ಬೇಡಾ, ನನಗೆ ಟೆಸ್ಟ್ ಮಾಡಿ ಪಾಸಿಟಿವ್ ಅಂತ ವರದಿ ಕೊಟ್ಟು ಪಾದಯಾತ್ರೆಯನ್ನು ಹತ್ತಿಕ್ಕುವ ಬಗ್ಗೆ ಬಿಜೆಪಿ ಪ್ಲಾನ್ ಮಾಡಿದೆ. ನನಗೆ ಕೋವಿಡ್ ಟೆಸ್ಟ್ ಮಾಡುವ ಬದಲು ಆರೋಗ್ಯ ಸಚಿವ ಸುಧಾಕರ್ ಗೆ ಟೆಸ್ಟ್ ಮಾಡಿ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಲ್ಲ ಎಂದು ಗುಡುಗಿದ್ದಾರೆ.
ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೇ ಬಾಯಿಗೆ ಬಂದಂತೆ ಮಾತನಾಡಿರುವುದು ಡಿ.ಕೆ.ಶಿ ಸಂಸ್ಕೃತಿಯನ್ನು ತೋರುತ್ತದೆ. ನಾವು ಅವರ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತೇವೆ. ಅವರೊಬ್ಬರಿಗೆ ಮಾತ್ರವಲ್ಲ ಪಾದಯಾತ್ರೆಯಲ್ಲಿ ಭಾಗಿಯಾದ ಎಲ್ಲರಿಗೂ ತಪಾಸಣೆ ಮಾಡುತ್ತೇವೆ. ರಾಜ್ಯ ಆರೋಗ್ಯ ಇಲಾಖೆ ಜನರ ಆರೋಗ್ಯದ ದೃಷ್ಟಿಯಿಂದ ಒಂದು ನಿಯಮ ಜಾರಿಗೆ ತಂದಿದೆ. ಅದನ್ನು ವಿಪಕ್ಷ ನಾಯಕರು ಅರ್ಥಮಾಡಿಕೊಳ್ಳದೇ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಜವಾಬ್ದಾರಿಯಿಂದ ವರ್ತಿಸಲಿ ಎಂದು ಎಚ್ಚರಿಸಿದ್ದಾರೆ.