ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ 14 ದಿನಗಳ ಲಾಕ್ ಡೌನ್ ಮಾದರಿಯಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಬಂಧನೆಗಳನ್ನು ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಗೃಹ ಇಲಾಖೆ ಕೂಡ ಕೊರೊನಾ ನಿರ್ವಹಣೆ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ನಿಯಮಗಳ ನಿರ್ವಹಣೆಗೆ 5 ಜನ ಎಡಿಜಿಪಿಗಳನ್ನು ನೇಮಕ ಮಾಡಲಾಗಿದೆ. ಕೋವಿಡ್ ಕೆಲಸಕ್ಕಾಗಿ ಗೃಹ ಇಲಾಖೆಯಿಂದ 8,500 ಹೋಮ್ ಗಾರ್ಡ್ ಗಳ ನಿಯೋಜನೆ ಮಾಡಲಾಗಿದೆ ಎಂದರು.
ಸಚಿವರ 1 ವರ್ಷದ ಹಾಗೂ ಶಾಸಕರ 1 ತಿಂಗಳ ವೇತನ ಕಡಿತಕ್ಕೆ ನಿರ್ಧಾರ
ವಿಶೇಷವಾಗಿ ಬೆಂಗಳೂರಿನಲ್ಲಿ 15,000 ಸಿವಿಲ್ ಡಿಫೆನ್ಸ್ ಸ್ವಯಂ ಸೇವಕ ಸಿಬ್ಬಂದಿಗಳನ್ನು ಪ್ರತಿ ವಾರ್ಡ್ ಗಳಲ್ಲಿ ಟ್ರ್ಯಾಕಿಂಗ್, ಟ್ರೇಸಿಂಗ್ ಹಾಗೂ ಹೋಂ ಐಸೋಲೇಷನ್ ಗಳ ಕೋವಿಡ್ ಕೆಲಸಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಪ್ರತಿ ವಾರ್ಡ್ ಗಳ ಸ್ವಚ್ಛತೆಗೆ ಆದೇಶ ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಎಲ್ಲಾ ಜೈಲುಗಳಲ್ಲಿ ಸ್ಯಾನಿಟೈಸ್ ಸ್ಪ್ರೇ ಮಾಡಲಾಗುವುದು. 300 ಕೈದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲರನ್ನೂ ಐಸೋಲೇಟ್ ಮಾಡಲಾಗಿದೆ ಎಂದು ತಿಳಿಸಿದರು.