ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದಲ್ಲಿ ದುಪ್ಪಟ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ನಾಳೆಯಿಂದಲೇ ಲಾಕ್ ಡೌನ್ ಜಾರಿ ಮಾಡಿ. ಮೇ 12ವರೆಗೆ ಕಾದು ನೋಡುವ ಅಗತ್ಯವೇಕೆ ಎಂದು ಪ್ರಶ್ನಿಸಿರುವ ಫನಾ, ಮೇ 15ರ ಬಳಿಕ ಸೋಂಕು ದುಪ್ಪಟ್ಟಾಗಲಿದೆ. ಈಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಆಪತ್ತು ಖಚಿತ ಎಂದು ಹೇಳಿದೆ.
ಈಗಾಗಲೇ ಬೆಂಗಳೂರಿನಲ್ಲಿ ಪ್ರತಿದಿನ 500 ಟನ್ ಆಕ್ಸಿಜನ್ ಅಗತ್ಯವಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ಲಸಿಕೆ ಉತ್ಪಾದನೆ ಕೂಡ ಸ್ಥಗಿತಗೊಂಡಿದೆ. ಇಂತಹ ಕಠಿಣ ಪರಿಸ್ಥಿತಿ ಇರುವಾಗ ರಾಜ್ಯ ಸರ್ಕಾರ ಜನರ ಜೀವದ ಜೊತೆ ಆಟವಾಡುವುದು ಸರಿಯಲ್ಲ. ಹಾಗಾಗಿ ಲಾಕ್ ಡೌನ್ ಜಾರಿ ಮಾಡುವಂತೆ ಫನಾ ಅಧ್ಯಕ್ಷ ಡಾ. ಪ್ರಸನ್ನ ಆಗ್ರಹಿಸಿದ್ದಾರೆ.