ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆದಿದ್ದು, ಲಾಕ್ ಡೌನ್, ವಾರಪೂರ್ತಿ ಕರ್ಫ್ಯೂ ಜಾರಿ ಬಗ್ಗೆ ಒತ್ತಾಯಗಳು ಕೇಳಿಬಂದಿವೆ.
ಸಭೆಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಮೇ 4ರ ಬಳಿಕ ಕೊರೊನಾ ಸೋಂಕು ಇನ್ನಷ್ಟು ಹೆಚ್ಚಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಕಠಿಣ ನಿಯಮ ಜಾರಿ ಅನಿವಾರ್ಯ. ರಾಜ್ಯದಲ್ಲಿ ಈಗಿರುವ ವೀಕೆಂಡ್ ಕರ್ಫ್ಯೂ ಮುಂದುವರೆಸುವುದು ಉತ್ತಮ ಎಂದು ಹೇಳಿದರು.
ʼಕೊರೊನಾʼ ಆತಂಕದ ನಡುವೆ ತಜ್ಞರಿಂದ ಮಹತ್ವದ ಮಾಹಿತಿ
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆ ಮಿತಿ ಮೀರುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲು ಬೆಂಗಳೂರಿನಲ್ಲಿ ಕಡಿವಾಣ ಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿ ಮಾಡಬೇಕು. ವಾರಪೂರ್ತಿ ಕರ್ಫ್ಯೂ ಜಾರಿ ಮಾಡಿದರೆ ಮಾತ್ರ ಸೋಂಕು ನಿಯಂತ್ರಣ ಸಾಧ್ಯ. ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದರೆ ಇತರ ಜಿಲ್ಲೆಗಳು ಸೇಫ್ ಆಗಲಿವೆ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಕೂಡ ಬೆಂಗಳೂರಿನಲ್ಲಿ ಕೊರೊನಾ ಕರಾಳತೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳು ಸಾವನ್ನಪ್ಪುತ್ತಿರುವ ಬಗ್ಗೆ, ಆಕ್ಸಿಜನ್ ಕೊರತೆ ಬಗ್ಗೆ ವಿವರಿಸಿದ್ದಾರೆ. ಬೆಂಗಳೂರನ್ನು ಮೂರು ವಿಭಾಗವಾಗಿ ವಿಂಗಡಿಸಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟು ಕ್ರಮ ಕೈಗೊಳ್ಳಬೇಕು. ವೀಕೆಂಡ್ ಕರ್ಫ್ಯೂ ಜೊತೆಗೆ ಮತ್ತಷ್ಟು ಕಠಿಣ ನಿಯಮ ಜಾರಿಗೊಳಿಸಿ ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರ ಟಫ್ ರೂಲ್ಸ್ ಜಾರಿಯಾಗುವುದು ಬಹುತೇಕ ಖಚಿತವಾಗಿದೆ.