ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮುಂದುವರೆದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್, ಕೆಲವರು ಸ್ವಾರ್ಥಕ್ಕಾಗಿ ಪಂಚಮಸಾಲಿ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಇದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯಾನಂದ ಕಾಶಪ್ಪನವರ್ ಅವರನ್ನು ಪಂಚಮಸಾಲಿ ರಾಷ್ಟ್ರಾಧ್ಯಕ್ಷರನ್ನಾಗಿ ಏಕಾಏಕಿ ಘೋಷಣೆ ಮಾಡಲಾಗಿದೆ. ಸಮುದಾಯದ ಇನ್ನೂ ಇಬ್ಬರು ಸ್ವಾಮೀಜಿಗಳು ಇದ್ದಾರೆ ಅವರ ಅಭಿಪ್ರಾಯವಾಗಲಿ, ಸಚಿವ ಶಾಸಕರ ಅಭಿಪ್ರಾಯವಾಗಲಿ, ಮುಖಂಡರ ಅಭಿಪ್ರಾಯವಾಗಲಿ ಕೇಳಿಲ್ಲ. ಸ್ವಯಂ ಆಗಿ ಇಂಥಹ ನಿರ್ಧಾರ ಕೈಗೊಂದಿರುವುದಾದರೂ ಯಾಕೆ? ಇದರ ಹಿಂದೆ ಕುತಂತ್ರ ಅಡಗಿದೆ. ಸಮುದಾಯಕ್ಕೆ ಕಾಶಪ್ಪನವರ್ ಕೊಡುಗೆಯಾದರೂ ಏನು? ಎಂದು ಪ್ರಶ್ನಿಸಿದರು.
ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಕಿಡಿಕಾರಿದ ಪಾಟೀಲ್, ಅನಗತ್ಯವಾಗಿ ಪ್ರಚೋದನಕಾರಿ ಭಾಷಣ ಮಾಡುತ್ತಾ, ಬೂಟಾಟಿಕೆ ಮಾತನಾಡುವುದನ್ನು ಯತ್ನಾಳ್ ನಿಲ್ಲಿಸಬೇಕು. ಇದರಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಯತ್ನಾಳ್ ಹಾಗೂ ಕಾಶಪ್ಪನವರ್ ಇಬ್ಬರೂ ಸೇರಿ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದಾರೆ. ಇದು ರಾಜಕೀಯ ದುರುದ್ದೇಶವಾಗಿದೆ ಎಂದು ಆರೋಪಿಸಿದರು.
ಪಂಚಮಸಾಲಿಗೆ ಮೀಸಲಾತಿ ನೀಡಬೇಕು ಎಂಬುದು ಸಮಂಜಸವಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಸಮಿತಿ ಕೂಡ ರಚನೆಯಾಗಲಿದೆ. ಮೀಸಲಾತಿ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಸರ್ಕಾರಕ್ಕೆ ಕಾಲಾವಕಾಶ ನೀಡಬೇಕು. ಪಂಚಮಸಾಲಿ ಮುಖಂಡರು ತಮ್ಮ ಹೋರಾಟವನ್ನು ಕೈಬಿಡಬೇಕು ಎಂದು ತಿಳಿಸಿದರು.