ಬೆಂಗಳೂರು: ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅಪಮಾನ. ರೈತ, ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬಣ್ಣ ಬದಲಿಸುವ ಗೋಸುಂಬೆ ವ್ಯಕ್ತಿತ್ವದವನಲ್ಲ. ನೆಲವನ್ನೇ ನಂಬಿ ಬದುಕುವ ಕಡು ಕಷ್ಟ ಜೀವಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಿ.ಸಿ.ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ರೈತ ಸಮುದಾಯಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ರಟ್ಟೆಗೆ ಬಲ ತುಂಬುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕೇ ಹೊರತು, ಹೇಡಿ ಎಂಬ ಪಟ್ಟ ಕಟ್ಟಿ ಹೊಣೆಗೇಡಿತನ ಪ್ರದರ್ಶಿಸಬಾರದು. ಕೃಷಿ ಸಚಿವರೇ ರೈತ ಸಮುದಾಯದ ವಿರುದ್ಧ ಎಲುಬಿಲ್ಲದ ನಾಲಿಗೆ ಹರಿ ಬಿಟ್ಟಿರುವುದು ಖಂಡನೀಯ. ರೈತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಹೆಂಡತಿ-ಮಕ್ಕಳು-ಸಂಬಂಧಿಕರ ಮುಂದೆ ಮರ್ಯಾದೆ ಹೋಯಿತಲ್ಲ ಎಂದು ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಹೇಡಿತನದ ಪಟ್ಟ ಕಟ್ಟಿಕೊಳ್ಳಲು ಅಲ್ಲ. ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಗುಡುಗಿದ್ದಾರೆ.