ಮೈಸೂರು: ರಾಸಲೀಲೆ ಸಿಡಿ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಾನಾಯಕ ಎಂದಾಕ್ಷಣ ತಾನೇ ಎಂದುಕೊಂಡು ಡಿ.ಕೆ.ಶಿವಕುಮಾರ್ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರನ್ನು ಯಾರಾದರೂ ಹೇಳಿದ್ದಾರಾ? ರಮೇಶ್ ಜಾರಕಿಹೊಳಿ ಮಹಾನಾಯಕರೊಬ್ಬರ ಪಿತೂರಿ ಇದೆ ಎಂದಾಕ್ಷಣ ಇವರು ತನಗೇ ಹೇಳಿದ್ದು ಎಂದುಕೊಳ್ಳುವುದೇಕೇ? ಈ ರಾಜ್ಯದಲ್ಲಿ ಮಹಾನಾಯಕರು ಬಹಳ ಜನರಿದ್ದಾರೆ. ಆ ಮಹಾನಾಯಕ ಯಾರೆಂದು ಗೊತ್ತಿಲ್ಲ. ಅದರಲ್ಲೂ ಬಿಜೆಪಿಯಲ್ಲಿಯೇ ಓರ್ವ ಮಹಾನಾಯಕ ಬೆಳೆಯುತ್ತಿದ್ದಾರೆ. ಹೀಗಿರುವಾಗ ಡಿಕೆಶಿ ತಮ್ಮ ಹೆಸರನ್ನು ತಾವೇ ಹೇಳಿ ಸಿಡಿ ಪ್ರಕರಣದಲ್ಲಿ ಯಾಕೆ ಸಿಲುಕಿಸಿಕೊಳ್ಳುತ್ತಿದ್ದಾರೆ?
ಡಿ.ಕೆ.ಶಿವಕುಮಾರ್ ನನಗಿಂತ ಪ್ರಬುದ್ಧ ರಾಜಕಾರಣಿ. ಅನುಭವಿ ಕೂಡ. ಆದರೆ ದುಡುಕಿ ತಮ್ಮ ಹೆಸರನ್ನು ತಾವೇ ಈ ಪ್ರಕರಣದಲ್ಲಿ ಹೇಳಿ ಸಿಲುಕಿಸಿಕೊಳ್ಳುತ್ತಿರುವುದು ಯಾಕೆಂದು ಗೊತ್ತಾಗುತ್ತಿಲ್ಲ. ಅದಕ್ಕೇ ಸಿಡಿ ಪ್ರಕರಣವನ್ನು ಹುಡುಗಾಟಿಕೆಯಾಗಿ ತೆಗೆದುಕೊಳ್ಳಲು ಹೊರಟಿದ್ದಾರೆ ಇದು ಸರಿಯಲ್ಲ. ಮೊದಲು ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ ಎಂದು ಹೇಳಿದರು.
ಇನ್ನು ಈ ಪ್ರಕರಣದಲ್ಲಿ ಯಾರನ್ನು ಸಂತ್ರಸ್ತರು ಅನ್ನುವುದು? ಇದರಲ್ಲಿ ಹೆಣ್ಣು ಮಗಳಿಗೆ ನ್ಯಾಯ ಸಿಗುತ್ತಾ? ಅಥವಾ ಇನ್ಯಾರಿಗೋ ಸಿಗುತ್ತಾ? ಸರ್ಕಾರದಿಂದ ತನಿಖೆ ನಡೆದಾಗ ತಾರ್ಕಿಕ ಅಂತ್ಯ ಕಾಣಲ್ಲ. ಇಂದು ಇಡೀ ದೇಶದ ವ್ಯವಸ್ಥೆಯೇ ಹಾಗಾಗಿದೆ. ರಾಜ್ಯದಲ್ಲಿಯೂ ಈಗ ಅದೇ ಪರಿಸ್ಥಿತಿ ಇದೆ. ಈಗಾಗಲೇ ಯುವತಿಗೆ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ. ಯಾರೋ ಆ ಯುವತಿಗೆ ಈಗಗಾಲೇ ರಕ್ಷಣೆ ನೀಡಿದ್ದಾರೆ. ಸರ್ಕಾರದ ಒಳಗೆ ಇದ್ದವರೇ ರಕ್ಷಣೆ ನೀಡುತ್ತಿದ್ದಾರಾ ಗೊತ್ತಿಲ್ಲ ಒಟ್ಟಾರೆ ರಕ್ಷಣೆಯಂತು ಸಿಕ್ಕಿದೆ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.