ಬೆಂಗಳೂರು: ಆಲ್ ಇಂಡಿಯಾ ಕಿಸಾನ್ ಕಮಿಟಿ ಸೆ.25ರಂದು ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯ ರೈತ ಸಂಘಟನೆಗಳು ತಾತ್ವಿಕ ಬೆಂಬಲ ನೀಡಿದ್ದು, ಕರ್ನಾಟಕದಲ್ಲಿ ಬಂದ್ ರೂಪುರೇಷೆ ಬಗ್ಗೆ ನಾಳೆ ಬೆಳಿಗ್ಗೆ ನಿರ್ಧಾರ ಪ್ರಕಟಿಸುವುದಾಗಿ ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ರೈತ ವಿರೋಧಿಯಾದ ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆಗಳನ್ನು ಚರ್ಚೆಗೂ ಅವಕಾಶ ನೀಡದೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಹೊರಟಿವೆ. ಒಂದು ವೇಳೆ ರೈತರಿಗೆ ಕಾಯಿದೆಯಿಂದ ಒಳ್ಳೆಯಯದಾಗುವುದಾದರೆ ಚರ್ಚೆಗೆ ಅವಕಾಶ ನೀಡಬಹುದಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳ ಜೊತೆ ಶಾಮಿಲಾಗಿದ್ದು, ಈ ಕಾಯಿದೆಗಳ ಜಾರಿ ಮೂಲಕ ರೈತರ ಹಕ್ಕನ್ನು ಕಿತ್ತುಕೊಳ್ಳುವ ಯತ್ನ ನಡೆಸಿವೆ. ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಮಗ ಎನ್ನುವುದಕ್ಕಿಂತ ಕಾರ್ಪೊರೇಟ್ ಕಂಪನಿಗಳ ಸಾಕು ಮಗನಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾತನಾಡಿದ ಕುರಬೂರು ಶಾಂತಕುಮಾರ್, ಭಾರತ್ ಬಂದ್ ಗೆ ರಾಜ್ಯ ರೈತ ಸಂಘಟನೆ ಸೇರಿದಂತೆ ಐಕ್ಯ ಸಮಿತಿ ತಾತ್ವಿಕ ಒಪ್ಪಿಗೆ ನೀಡಿದ್ದು, ಕರ್ನಾಟಕದಲ್ಲಿ ಬಂದ್ ಬಗ್ಗೆ ನಾಳೆ ಬೆಳಿಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.