ಬೆಂಗಳೂರು: ಮಹಾರಾಷ್ಟ್ರ ಹಾಗೂ ಕೇರಳದ ಬೆನ್ನಲ್ಲೇ ಕರ್ನಾಟಕದಲ್ಲೂ ಮತ್ತೆ ಕೊರೊನಾ ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ. ಈ ಬಗ್ಗೆ ಸ್ವತ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ನೆರೆಯ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 13,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದು ನನ್ನನ್ನು ಚಿಂತೆಗೀಡುಮಾಡಿದೆ. ಇದನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ, ಹಬ್ಬ-ಹರಿದಿನಗಳು, ಸಭೆ-ಸಮಾರಂಭಗಳು ಏನೇ ಇದ್ದರೂ ಮಾಸ್ಕ್ ಧರಿಸುವುದು, ಭೌತಿಕ ಅಂತರವನ್ನು ತಪ್ಪದೇ ಪಾಲಿಸಬೇಕು. ಜನಸಂದಣಿಯಿಂದ ದೂರವಿರಬೇಕು ಎಂದಿದ್ದಾರೆ.
ಕೊರೊನಾ ಲಸಿಕೆ ಹಾಕಿಸಿಕೊಂಡವರು ಏನು ಮಾಡ್ಬೇಕು….? ಏನು ಮಾಡಬಾರದು….?
60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟು ಸಹ-ಅಸ್ವಸ್ಥತೆ ಹೊಂದಿರುವವರು ತಪ್ಪದೇ ಆದಷ್ಟು ಬೇಗ ಕೊರೊನಾ ಲಸಿಕೆ ಪಡೆಯಬೇಕು. ಮನೆಗಳಲ್ಲಿ, ಬಂಧು-ಬಳಗದಲ್ಲಿ, ಸ್ನೇಹಿತರಲ್ಲಿ, ನೆರೆಹೊರೆಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಅರ್ಹ ವ್ಯಕ್ತಿಗಳಿದ್ದರೆ ಅವರಿಗೆ ಲಸಿಕೆ ಪಡೆಯುವಂತೆ ಅರಿವು ಮೂಡಿಸಿ ಎಂದು ಹೇಳಿದ್ದಾರೆ.
ಇದೇ ವೇಳೆ ಕೆಲ ಖಾಸಗಿ ಶಾಲೆಗಳು ಸರ್ಕಾರದ ಅನುಮತಿ ಇಲ್ಲದಿದ್ದರೂ 1-6ನೇ ತರಗತಿಯ ಮಕ್ಕಳಿಗೆ ಶಾಲೆ ಪುನರಾರಂಭಿಸಿರುವುದರ ಬಗ್ಗೆ ದೂರು ಬಂದಿವೆ. ನಿಯಮ ಉಲ್ಲಂಘಿಸಿ ತರಗತಿಗಳನ್ನು ಪುನರಾರಂಭಿಸಿರುವ ಶಾಲೆಗಳ ವಿರುದ್ಧ ಪರವಾನಗಿ ರದ್ದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.