ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಇದೀಗ ಚಿಕ್ಕಬಳ್ಳಾಪುರದ ಹಿರೇನಾಗವೇಲಿಯಲ್ಲಿ ಕೂಡ ಜಿಲೆಟಿನ್ ಸ್ಫೋಟ ಸಂಭವಿಸಿ 6 ಜನರು ಬಲಿಯಾಗಿದ್ದಾರೆ. ಒಂದು ತಿಂಗಳಲ್ಲಿ ನಡೆದ ಎರಡನೇ ದುರ್ಘಟನೆ ಇದಾಗಿದ್ದು, ಸರ್ಕಾರದ ಬೇಜವಾಬ್ದಾರಿಗೆ ಅದೆಷ್ಟು ಜೀವಗಳು ಬಲಿಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಘಟನೆ ನಡೆದಾಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡಿದ್ದರೆ ಇಂದು ಮತ್ತೊಂದು ದುರಂತ ಸಂಭವಿಸುತ್ತಿರಲಿಲ್ಲ. ಈಗ ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಫೋಟಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.
ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್: ಎರಡು ದಿನದ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆ
ಅಂದಿನಿಂದಲೂ ಸಚಿವರುಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡುತ್ತಲೇ ಇದ್ದಾರೆ. ಇದು ಹಾಸ್ಯಾಸ್ಪದವೆನಿಸುತ್ತಿದೆ. ಶಿವಮೊಗ್ಗ ಪ್ರಕರಣ ನಡೆದಾಗಲೇ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಇಂದು ಮತ್ತೊಂದು ದುರಂತ ಸಂಭವಿಸುತ್ತಿರಲಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಇನ್ನಷ್ಟು ಜೀವಗಳು ಬಲಿಯಾಗುವುದನ್ನು ತಡೆಯಲಿ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲಿ ಎಂದು ಒತ್ತಾಯಿಸಿದ್ದಾರೆ.