ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಇಷ್ಟಾದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಮಧ್ಯೆ ಡೀಸೆಲ್ ದರ ಏರಿಕೆ ಹಾಗೂ ಸರ್ಕಾರದ ಗುಜರಿ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಏಪ್ರಿಲ್ 5ರಿಂದ ಅನಿರ್ದಿಷ್ಟಾವಧಿಗೆ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.
ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಚೆನ್ನಾರೆಡ್ಡಿ ಈ ವಿಷಯವನ್ನು ತಿಳಿಸಿದ್ದು, ಎಂಟು ತಿಂಗಳ ಹಿಂದೆ ಡೀಸೆಲ್ ದರ ಪ್ರತಿ ಲೀಟರ್ ಗೆ 65.94 ರೂ. ಇದ್ದು ಈಗ 83.36 ರೂಪಾಯಿ ಆಗಿದೆ. ಈ ಅವಧಿಯಲ್ಲಿ ಒಟ್ಟು 20.42 ರೂ. ಏರಿಕೆಯಾಗಿದ್ದು, ಇದನ್ನು ನಿಭಾಯಿಸಲು ಲಾರಿ ಮಾಲೀಕರುಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಡೀಸೆಲ್ ದರ ಇಳಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಅಲ್ಲದೆ ಹದಿನೈದು ವರ್ಷ ಹಳೆಯದಾದ ವಾಹನಗಳಿಗೆ ಗುಜರಿ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಈ ನಿಯಮದಿಂದಾಗಿ ಸಾವಿರಾರು ಲಾರಿಗಳು ಗುಜರಿ ಸೇರಲಿವೆ. ಸಂಚಾರಕ್ಕೆ ಯೋಗ್ಯವಲ್ಲದ ವಾಹನಗಳ ಪರೀಕ್ಷೆಗೆಂದೇ FC ಪ್ರಮಾಣಪತ್ರ ಪಡೆಯುವ ನಿಯಮವಿದ್ದು, ಇಷ್ಟಾದರೂ ಗುಜರಿ ನಿಯಮ ಜಾರಿಗೆ ತಂದಿರುವುದು ಸೂಕ್ತವಲ್ಲ ಎಂದು ಅವರು ಹೇಳಿದರು. ಹೀಗಾಗಿ ಡೀಸೆಲ್ ದರ ಇಳಿಕೆ ಮಾಡಲು ಹಾಗೂ ಗುಜರಿ ನೀತಿಯನ್ನು ಹಿಂಪಡೆಯಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದೇವೆ ಎಂದು ಚೆನ್ನಾರೆಡ್ಡಿ ಮಾಹಿತಿ ನೀಡಿದರು.