ಮೈಸೂರು: ಬಹುದಿನಗಳ ಬಳಿಕ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅವರು ರಾಜಕೀಯವಾಗಿ ನನ್ನ ತೀರ್ಮಾನ ದೆಹಲಿಗೆ ಹೋದ ನಂತರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ. ಈವರೆಗೆ ನಾನು ಏನೇನು ಹೇಳಿದ್ದೇನೋ ಅದೆಲ್ಲವೂ ಆಗಿದೆ. ಏಪ್ರಿಲ್ ತಿಂಗಳ ಬಳಿಕ ಬದಲಾವಣೆ ಖಚಿತ ಎಂದರು.
ಇನ್ನು ನಮ್ಮಲ್ಲಿ ಕೆಲವರು 1 ರೂಪಾಯಿ ಬಂಡವಾಳ ಹಾಕಿ 10 ರೂಪಾಯಿ ಲಾಭ ಪಡೆಯುತ್ತಾರೆ. ಆದರೆ ಒಂದು ರೂಪಾಯಿ ಹಾಕಿರುವ ನಮಗೆ ಎಂಟಾಣಿ ಸಿಗುತ್ತೆ ಎಂದು ಹೇಳುವ ಮೂಲಕ ಶಾಸಕ ಜಮೀರ್ ಅಹ್ಮದ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ನಮಗೆ ಕೋಡಬೇಕಾದ್ದು ಕೊಟ್ಟರೆ ಸಾಕು. ನಮ್ಮಲ್ಲಿ ಆಗಲಿ, ದೆಹಲಿಯಲ್ಲಿ ಆಗಲಿ 1 ರೂಪಾಯಿ ಬಂಡವಾಳ ಹಾಕಿದರೆ ಎಂಟಾಣಿ ಸಿಗುತ್ತದೆ. ಆದರೆ ಕೆಲವರಿಗೆ 1 ರೂಪಾಯಿಗೆ 10 ರೂ.ಸಿಗುತ್ತದೆ. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಮುನ್ನಡೆಯಬೇಕು ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದಾಗಿ ತಿಳಿಸಿದ್ದಾರೆ.