ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಸರ್ಕಾರ ಎಸ್ಐಟಿ ಮೇಲೆ ಒತ್ತಡ ಹೇರಿ ತನಿಖೆಯ ಹಾದಿ ತಪ್ಪಿಸಲಾಗುತ್ತಿದೆ ಎಂದು ಯುವತಿ ಪರ ವಕೀಲ ಜಗದೀಶ್ ಆರೋಪಿಸಿದ್ದಾರೆ.
ಸಿಡಿ ಯುವತಿ ಬರೆದ ಪತ್ರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಗದೀಶ್, ಎಸ್ಐಟಿ ತನಿಖೆ ಹಾದಿ ತಪ್ಪಿಸಲಾಗುತ್ತಿದೆ. ಅಧಿಕಾರಿಗಳು ಜನರನ್ನು ಫೂಲ್ ಮಾಡುತ್ತಿದ್ದಾರೆ. ಇದರ ಬದಲು ಎಸ್ಐಟಿಯನ್ನು ಮುಚ್ಚಿಬಿಡಿ ಎಂದರು. ನನಗೆ ಎಸ್ಐಟಿ ತನಿಖೆ ಮೇಲೆ ನಂಬಿಕೆ ಬರುತ್ತಿಲ್ಲ. ದೂರುದಾರಳಾದ ನನ್ನನ್ನೇ ಆರೋಪಿಯಂಬಂತೆ ನೋಡುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ದೂರು ನೀಡುತ್ತಿದ್ದಾಳೆ ಎಂದು ಹೇಳಿದರು.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುವುದನ್ನು ಬಿಟ್ಟು ಅಧಿಕಾರಿಗಳು ಆತನನ್ನು ಓಡಾಡಲು ಬಿಟ್ಟಿದ್ದಾರೆ. ಸರ್ಕಾರ ಆತನಿಗೆ ರಕ್ಷಣೆ ನೀಡುತ್ತಿದೆ. ಸಂತ್ರಸ್ತೆಯನ್ನೇ ಆರೋಪಿ ಎಂಬಂತೆ ಬಿಂಬಿಸಿ ವಿಚಾರಣೆ ಮೇಲೆ ವಿಚಾರಣೆ ನಡೆಸಲಾಗುತ್ತಿದೆ. ಸ್ವತ: ಸಿಎಂ ಆರೋಪಿ ರಕ್ಷಣೆಗೆ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರಬರುತ್ತಾರೆ ಎಂದು ಸಿಎಂ ಹೇಳಿಕೆ ನಿಡುತ್ತಿರುವುದು ಸರ್ಕಾರದ ಮುಖ್ಯಸ್ಥರೇ ಆರೋಪಿ ರಕ್ಷಣೆ ಮಾಡುವುದರ ಜೊತೆಗೆ ತನಿಖೆ ಮೇಲೆ ಒತ್ತಡ ಹಾಕುತ್ತಿರುವುದು ಸ್ಪಷ್ಟ. ಎಸ್ಐಟಿಯಿಂದ ಸ್ವತಂತ್ರ ತನಿಖೆ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದು ಪ್ರಮುಖ ವಿಚಾರವೆಂದರೆ ರಮೇಶ್ ಜಾರಕಿಹೊಳಿ ದೂರಿನಲ್ಲಿ ಯುವತಿ ಹೆಸರಿಲ್ಲ. ಯಾವುದೇ ಆಧಾರವಿಲ್ಲದೇ ಎಸ್ಐಟಿ ಅಧಿಕಾರಿಗಳು ಯುವತಿ ವಾಸವಿದ್ದ ಪಿಜಿ ಮೇಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಅವರ ಬಳಿ ಸ್ಪಷ್ಟ ಉತ್ತರವಿಲ್ಲ. ಯುವತಿ ಕೊಠಡಿಯಲ್ಲಿ 9 ಲಕ್ಷ ಹಣ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಆಧಾರವಿಲ್ಲದೇ ಪಿಜಿ ಮೇಲೆ ದಾಳಿ ನಡೆಸಿದ್ದು ಯಾಕೆ? ಪ್ರಸಕ್ತ ಬೆಳವಣಿಗೆಗಳನ್ನು ಗಮನಿಸಿದರೆ ಎಸ್ಐಟಿ ಅಧಿಕಾರಿಗಳು ತನಿಖೆ ಸರಿಯಾಗಿ ಮಾಡುತ್ತಿಲ್ಲ. ಹಾಗಾಗಿ ಯಾವುದೆ ಒತ್ತಡಕ್ಕೆ ಮಣಿಯದೇ ತನಿಖೆ ನಡೆಸಿ, ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾಳೆ ಎಂದರು.