ಕೋವಿಡ್-19 ನಂತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿನ್ಯಾಸ ಮತ್ತು ಉತ್ಪಾದನಾ (ಇಎಸ್‌ಡಿಎಂ) ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಖರೀದಿಸಲಾಗುವ ಭೂಮಿಗೆ ಶೇ.25ರಷ್ಟು ರಿಯಾಯಿತಿ ಸಿಗಲಿದೆ.
ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಸಂಘ (ಐಇಎಸ್‌ಎ) ಬುಧವಾರ ಹಮ್ಮಿಕೊಂಡಿದ್ದ ʼವಿಷನ್ ಶೃಂಗಸಭೆ- 2020 ಅನ್ನು ಉದ್ದೇಶಿಸಿ ಆನ್ ಲೈನ್‌ನಲ್ಲಿ ಮುಖ್ಯ ಭಾಷಣ ಮಾಡಿದ ಎಲೆಕ್ಟ್ರಾನಿಕ್ಸ್, ಐಟಿ- ಬಿಟಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಇಡೀ ದೇಶದಲ್ಲಿ ಇಂಥ ಕ್ರಮ ಕೈಗೊಂಡಿರುವ ಏಕೈಕ ಹಾಗೂ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹಾಗೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ ಮಾಡಲು ಇಂಥ ದಿಟ್ಟಹೆಜ್ಜೆ ಇಡಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಖರೀದಿಸುವ ಜಮೀನುಗಳಿಗೆ ಈ ರಿಯಾಯಿತಿ ಅನ್ವಯ ಆಗುವುದಿಲ್ಲ. ಉಳಿದ ಯಾವುದೇ ಜಿಲ್ಲೆಗಳಲ್ಲಿ 50 ಎಕರೆವರೆಗೆ ಭೂಮಿ ಖರೀದಿ ಮಾಡಿ ಕೈಗಾರಿಕೆ ಸ್ಥಾಪಿಸಿದರೂ ಈ ಸೌಲಭ್ಯ ದೊರೆಯಲಿದೆ. ಕೆಐಎಡಿಬಿ/ಕೆಎಸ್‌ಎಸ್‌ಐಡಿಸಿ ಯಿಂದ ಖರೀದಿಸಿದ ಭೂಮಿಯ ಮಾರ್ಗದರ್ಶಿ ದರ ಅಥವಾ ಭೂಮಿಯ ಖರೀದಿ ದರದ ಶೇ.25ರಷ್ಟು ರಿಯಾಯಿತಿ ಸಿಗಲಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ, ಕೈಗಾರಿಕಾ ಘಟಕ ಸ್ಥಾಪನೆ ಮತ್ತು ಯಂತ್ರಗಳ ಖರೀದಿಗೆ ಹೂಡಿಕೆ ಮಾಡುವ ಒಟ್ಟು ಹಣದಲ್ಲಿ ಶೇ.20ರಷ್ಟು ರಿಯಾಯಿತಿ ನೀಡುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ.