ಬೆಂಗಳೂರು: ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಆರುವರೆ ಕೋಟಿ ಜನತೆಗೂ ಉಚಿತವಾಗಿ ಲಸಿಕೆಯನ್ನು ನೀಡುವ ಮೂಲಕ ನೆರವಿಗೆ ಧಾವಿಸಬೇಕೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈಗಿನ ಸಂದರ್ಭದಲ್ಲಿ ಜನರು ಹಣ ಕೊಟ್ಟು ಲಸಿಕೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರವೇ ಮುಂದೆ ಬಂದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವ ತೀರ್ಮಾನವನ್ನು ಪ್ರಕಟಿಸಬೇಕು ಎಂದು ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈಗಾಗಲೇ ಜಾರ್ಖಂಡ್, ಗೋವಾ, ಛತ್ತೀಸ್ಘಡ, ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಕೇರಳ, ಬಿಹಾರ ಮತ್ತು ಸಿಕ್ಕಿಂನಲ್ಲಿ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಲಾಗಿದೆ. ಈಗ ಕರ್ನಾಟಕದಲ್ಲಿಯೂ ಸಹ ಇದೇ ಕ್ರಮ ಅನುಸರಿಸಬೇಕು ಎಂದು ಸಿಎಂ ಯಡಿಯೂರಪ್ಪನವರಿಗೆ ನನ್ನ ಮನವಿ. ಸುಮಾರು ಒಂದು ಕೋಟಿ ಡೋಸ್ ಲಸಿಕೆ ಕೊಳ್ಳಲು 400 ಕೋಟಿ ರೂ. ಮೀಸಲಿಡಲಾಗಿದೆ. ಸರಿಸುಮಾರು 2.50 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುವ ಸರಕಾರಕ್ಕೆ ಕನಿಷ್ಠ ಪಕ್ಷ 2 ಸಾವಿರ ಕೋಟಿ ಹಣವನ್ನು ಲಸಿಕೆ ಖರೀದಿ ಮಾಡಲು ಮೀಸಲಿಡುವುದರಿಂದ ಬೊಕ್ಕಸಕ್ಕೆ ಭಾರೀ ಹೊರೆಯಾಗದು ಎಂದಿದ್ದಾರೆ.
ಬಡವ-ಬಲ್ಲಿದ ಎಂದು ತಾರತಮ್ಯ ಮಾಡದೇ ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವಂತೆ ಒಂದುವರೆ ತಿಂಗಳ ಹಿಂದೆಯೇ ಸರ್ಕಾರಕ್ಕೆ ಸಲಹೆ ನೀಡಿದ್ದೆ. ಪಲ್ಸ್ ಪೋಲಿಯೋ ಲಸಿಕೆ ನೀಡಿದ ಮಾದರಿಯಲ್ಲಿ ಎಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡುವ ನಿರ್ಧಾರ ಕೈಗೊಂಡರೆ ಅದು ಅಭಿನಂದನಾರ್ಹ ಎಂದು ಹೇಳಿದ್ದಾರೆ.