ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದ್ದು, ಸೋಂಕಿತರ ಪ್ರಮಾಣ ಏರಿಕೆಯಾಗುತ್ತಲೇ ಸಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಂಕು ಹೊಂದಿರುವ ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ ಬಳಿಕ ಅದರ ವರದಿ ಲಭ್ಯವಾಗುವುದಕ್ಕೆ 24 ಗಂಟೆಗಳು ತಗುಲುತ್ತಿತ್ತು. ಹೀಗಾಗಿ ಅಷ್ಟರೊಳಗೆ ಕೊರೊನಾ ಪಾಸಿಟಿವ್ ಆದ ವ್ಯಕ್ತಿ ಹಲವರ ಸಂಪರ್ಕ ಬಂದರೆ ಮತ್ತಷ್ಟು ಜನರಿಗೆ ಇದು ವ್ಯಾಪಿಸುವ ಸಾಧ್ಯತೆ ಇತ್ತು.
ಇದೀಗ ಗಂಟಲು ದ್ರವ ಮಾದರಿ ಪರೀಕ್ಷೆ ವರದಿ ಕೇವಲ 30 ನಿಮಿಷದಲ್ಲಿ ಲಭ್ಯವಾಗಲಿದೆ ಎನ್ನಲಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ರಾಪಿಡ್ ಆಂಟಿಜೆನ್ ಕಿಟ್ ಗಳನ್ನು ಬಳ್ಳಾರಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲೂ ಇದು ಬಳಕೆಯಾಗುವ ಸಾಧ್ಯತೆ ಇದೆ.