ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಇಂದು ಪ್ರಧಾನಿ ಮೋದಿ ಜಾಗದಲ್ಲಿ ಇನ್ಯಾರೋ ಇದ್ದಿದ್ದರೆ ಪರಿಸ್ಥಿತಿ ಇದಕ್ಕಿಂತ ಗಂಭೀರವಾಗಿರುತ್ತಿತ್ತು ಎಂದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಇದಕ್ಕಿಂತ ಭೀಕರ ಸ್ಥಿತಿ ಇನ್ನೇನು ಬೇಕು ಎಂದು ಕಿಡಿಕಾರಿದೆ.
ಆರ್ಥಿಕತೆ -23ಕ್ಕೆ ಕುಸಿತಗೊಂಡಿದೆ… ನಿರುದ್ಯೋಗ 45 ವರ್ಷದಲ್ಲೇ ಅಧಿಕವಾಗಿದೆ… ಕರೊನಾದಲ್ಲಿ ಜಗತ್ತಿನ 2ನೇ ದೇಶ ಭಾರತ… ಕೋವಿಡ್ ನಿಂದಾಗಿ ಯುದ್ಧವಿಲ್ಲದೆಯೇ ಭೂಮಿ ಚೀನಾ ಪಾಲಾಗಿದೆ… ಪಾಕಿಸ್ತಾನದಿಂದ ಸಹಾಯ ಪಡೆಯುವ ಸ್ಥಿತಿ ಬಂದಿದೆ… ವಿದೇಶಿ ಮಾದ್ಯಮಗಳಲ್ಲಿ ಮಾನ ಹರಾಜಾಗುತ್ತಿದೆ. ಇಷ್ಟಾದರೂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದೀರಿ. ದೇಶಕ್ಕೆ ಇದಕ್ಕಿಂತ ಭೀಕರ ಸ್ಥಿತಿ ಇನ್ನೇನಾಗಬೇಕು ಸಿ.ಟಿ.ರವಿಯವರೇ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
ಜನರ ಸಾವು ನೋವಿಗೆ ಕೇಂದ್ರ – ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ: ಸಿದ್ದರಾಮಯ್ಯ ಆಕ್ರೋಶ
ನಿನ್ನೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಸಿ.ಟಿ.ರವಿ, ವಿಪಕ್ಷಗಳು ಕೊರೊನಾ ವಿರುದ್ಧ ಹೋರಾಟದಲ್ಲಿ ಸಹಕರಿಸಬೇಕು ಹೊರತು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವವರ ವಿರುದ್ಧವೇ ಹೋರಾಟ ಮಾಡುವ ಸಣ್ಣತನ ತೋರಬಾರದು. ಭಾರತ ಸರ್ಕಾರ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಇಂದು ಪ್ರಧಾನಿ ಮೋದಿ ಜಾಗದಲ್ಲಿ ಬೇರೆ ಇನ್ಯಾರನ್ನೋ ಕಲ್ಪಿಸಿಕೊಂಡಿದ್ದರೆ ಇದಕ್ಕಿಂತ ಗಂಭೀರ ಸ್ಥಿತಿ ಆಗಿರುತ್ತಿತ್ತು ಎಂದು ಹೇಳಿದ್ದರು.