ಬೆಂಗಳೂರು: ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಇಂದು ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಧೀಶರ ಮುಂದೆಯೇ ಹೇಳಿಕೆಗಳನ್ನು ದಾಖಲಿಸಲಿದ್ದಾಳೆ. ಆದರೆ ಆಕೆ ಬಂದು ಹೇಳಿಕೆಗಳನ್ನು ದಾಖಲಿಸಲು ಒಳ್ಳೆಯ ವಾತಾವರಣ ಕಲ್ಪಿಸಬೇಕು ಎಂದು ಸಿಡಿ ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಯುವತಿ ಹೇಳಿಕೆ ರೆಕಾರ್ಡ್ ಮಾಡಲು ಅನುಮತಿ ಕೇಳುತ್ತಿದ್ದೇವೆ. ಯುವತಿಗೆ ಸೂಕ್ತ ರಕ್ಷಣೆ ಸಿಕ್ಕರೆ ಇಂದು ಮಧ್ಯಾಹ್ನವೇ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ ಎಂದರು.
ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ
ನಿನ್ನೆ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಮೇಲೆ ಕಲ್ಲುತೂರಾಟ, ಚಪ್ಪಲಿ ಎಸೆತದಂತಹ ಕೃತ್ಯ ನಡೆಸಿ ಆರೋಪಿ ಬೆಂಬಲಿಗರು ದಾಳಿ ಮಾಡಿದ್ದಾರೆ. ಹೀಗಿರುವಾಗ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಬಂದು ಹೇಳಿಕೆ ನೀಡಲು ಕೂಡ ಭಯದ ವಾತಾವರಣವಿದೆ. ಸಧ್ಯದ ಬೆಳವಣಿಗೆ ನೋಡಿದರೆ ನನಗೆ ವ್ಯವಸ್ಥೆ ಮೇಲೆ ನಂಬಿಕೆ ಬರುತ್ತಿಲ್ಲ ಎಂದು ಸ್ವತಃ ಯುವತಿಯೇ ಹೇಳಿಕೆ ನೀಡಿದ್ದಾಳೆ. ಮೊದಲು ಆರೋಪಿಯನ್ನು ಬಂಧಿಸಿ, ಒಳ್ಳೆಯ ವಾತಾವರಣ ಕಲ್ಪಿಸಿಕೊಡಬೇಕು. ಆರೋಪಿ ಬಂಧನವಾಗದೇ ಉತ್ತಮ ವಾತಾವರಣ ಸಾಧ್ಯವಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಗೂ ನಾವು ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದರು.