ಹಾಸನ: ನೆರೆಹಾನಿ ಅನುದಾನ ಹಂಚಿಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಎದುರು ಶಾಸಕರಿಬ್ಬರು ಕಿತ್ತಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಕೆಡಿಪಿ ಸಭೆಯಲ್ಲಿ ಅತಿವೃಷ್ಟಿಗೆ ಬಿಡುಗಡೆಯಾದ ಅನುದಾನ ಹಂಚಿಕೆ ವಿಚಾರಕ್ಕಾಗಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿ ಶಾಸಕ ಪ್ರೀತಂ ಗೌಡ ನಡುವೆ ಜಟಾಪಟಿ ನಡೆದಿದೆ.
ಸಭೆಯಲ್ಲಿ ಶಾಸಕ ಪ್ರೀತಮ್ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಿವಲಿಂಗೇಗೌಡ, ನೆರೆಹಾನಿ ಪರಿಹಾರ ನಿಟ್ಟಿನಲ್ಲಿ ಬಿಡುಗಡೆಯಾಗಿರುವ 19 ಕೋಟಿ ರೂ. ಅನುದಾನ ಎಲ್ಲಾ ಕ್ಷೇತ್ರಗಳಿಗೂ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಅರಸೀಕೆರೆ, ಚೆನ್ನರಾಯಪಟ್ಟಣವನ್ನು ಕಡೆಗಣಿಸಲಾಗಿದೆ. ನೀನು ತಂದ ಹಣ ಸರ್ಕಾರದ ಅನುದಾನ ನೆರೆಹಾನಿಯಿಂದ ಸಂಕಷ್ಟಕ್ಕೊಳಗಾದ ಎಲ್ಲಾ ಕ್ಷೇತ್ರಕ್ಕೂ ಕೊಡಬೇಕು ಎಂದು ಮೇಜುಕುಟ್ಟಿ ಆಗ್ರಹಿಸಿದರು.
ಇದಕ್ಕೆ ಕೆರಳಿ ಕೆಂಡವಾದ ಬಿಜೆಪಿ ಶಾಸಕ ಪ್ರೀತಂ ಗೌಡ, ನೀವು ಟೇಬಲ್ ಬಡಿದರೆ ನಮಗೂ ಬಡಿಯೋಕೆ ಬರುತ್ತೆ. ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ನೀವು ಯಾರು? ನಮ್ಮ ಸರ್ಕಾರ, ನಮ್ಮ ಸಿಎಂ, ನಮಗೆ ಅನುದಾನ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಇಬ್ಬರ ಜಟಾಪಟಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಸಚಿವ ಕೆ. ಗೋಪಾಲಯ್ಯ, ಕ್ಷೇತ್ರದಲ್ಲಿ ಸಮಸ್ಯೆಗಳಿದ್ದರೆ ಹೆಚ್ಚಿನ ಅನುದಾನ ಕೊಡಿಸುತ್ತೇನೆ. ಅನಗತ್ಯವಾಗಿ ಜಟಾಪಟಿ ಬೇಡ ಎಂದು ಸಮಾಧಾನ ಪಡಿಸಿದರು.