ಮೈಸೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಬೆಲೆ ಏರಿಕೆಯ ಸಂಕಷ್ಟದಿಂದ ತತ್ತರಿಸಿರುವ ಬಿಜೆಪಿ ಕಾರ್ಯಕರ್ತರು ಕೂಡ ಸ್ವಪಕ್ಷದ ನಾಯಕರ ವಿರುದ್ಧವೇ ತಿರುಗಿಬಿದ್ದಿರುವ ಘಟನೆ ನಡೆದಿದೆ.
2021-22ನೇ ಸಾಲಿನ ಬಜೆಟ್ ವಿಮರ್ಶೆ ಮತ್ತು ವಿಶ್ಲೇಷಣೆ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಗರಂ ಆಗಿದ್ದು, ಪ್ರತಿದಿನ ಏರಿಕೆಯಾಗುತ್ತಿರುವ ತೈಲ ಬೆಲೆಯಿಂದಾಗಿ ಜನಸಾಮಾನ್ಯರ ಪ್ರಶ್ನೆಗೆ ಉತ್ತರಿಸಲಾಗದ ಸ್ಥಿತಿಯಲ್ಲಿದ್ದೇವೆ. ಸಾರ್ವಜನಿಕರು ಅಚ್ಚೇ ದಿನ್ ಎಲ್ಲಿದೆ? ಉತ್ತರ ನೀಡಿ ಎಂದು ಕೇಳುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನರಿಗೆ ಅಚ್ಚೇ ದಿನದ ಬಗ್ಗೆ ಏನೆಂದು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
ರೈತರು, ಮನೆ ನಿರ್ಮಿಸುವವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್
ಅಚ್ಚೇ ದಿನ್ ಭರವಸೆಗಳನ್ನು ನೀಡಿ ಪ್ರಧಾನಿ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು ಆದರೆ ಈಗ ದೇಶದಲ್ಲಿ ದಿನದಿಂದ ದಿನಕ್ಕೆ ಆರ್ಥಿಕ ಸಂಕಷ್ಟ, ನಿರುದ್ಯೋಗ ಹೆಚ್ಚುತ್ತಿರುವುದರ ಜೊತೆಗೆ ಬೆಲೆ ಏರಿಕೆಯ ಬಿಸಿ ಹೆಚ್ಚಿದೆ. ಹೀಗಿರುವಾಗ ದೇಶದಲ್ಲಿ ಅಚ್ಚೇ ದಿನ್ ಎಲ್ಲಿದೆ ಎಂಬುದು ಜನಸಾಮಾನ್ಯನ ಪ್ರಶ್ನೆಯಾಗಿದೆ. ಜನರು ಕೇಳುವ ಪ್ರಶ್ನೆಗಳಿಗೆ ನಾವು ಏನೆಂದು ಉತ್ತರಿಸಬೇಕು ಎಂದು ಹೇಳಿದರೆ ನಾವು ಹಾಗೆಯೇ ಉತ್ತರಿಸುತ್ತೇವೆ ಎಂದು ಬಿಜೆಪಿ ನಾಯಕರ ಬಳಿ ಕಾರ್ಯಕರ್ತರ ತಮ್ಮ ಅಳಲು ತೋಡಿಕೊಂಡಿದ್ದಾರೆ.