ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಕಟಿಸಿದರು.
ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ ಮತ್ತೂ ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಸರಕಾರವೂ ಮುಂದಿನ ತಿಂಗಳಿಂದ ಆನ್ ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ. ಜತೆಗೆ, ಅಕ್ಟೋಬರ್ ತಿಂಗಳಿಂದಲೇ ಎಲ್ಲ ಕಾಲೇಜುಗಳನ್ನು ಆರಂಭಿಸಲಾಗುವುದು. ವಿದ್ಯಾರ್ಥಿಗಳು ಕೂಡ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದರು.
ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.