ಇಂದು ಮಧ್ಯಾಹ್ನ ಚಿತ್ರದುರ್ಗದಲ್ಲಿ ಅಸ್ವಸ್ಥಗೊಂಡ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಕಾರಿನಿಂದ ಇಳಿಯುತ್ತಲೇ ಕುಸಿದು ಬಿದ್ದ ಅವರನ್ನು ಕೂಡಲೇ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಕೊಂಚ ಚೇತರಿಸಿಕೊಂಡ ಬಳಿಕ ಅವರನ್ನು ಝೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಸದಾನಂದ ಗೌಡ, ಬೆಂಗಳೂರಿನಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಚಿತ್ರದುರ್ಗ ಮೂಲಕ ಬೆಂಗಳೂರಿಗೆ ಹೊರಟಿದ್ದರೆನ್ನಲಾಗಿದೆ.
ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಹೀಗಾಗಿ ನವೀನ್ ಹೋಟೆಲ್ ಬಳಿ ಸದಾನಂದ ಗೌಡ ಕಾರಿನಿಂದ ಇಳಿದ ಕೆಲ ನಿಮಿಷಗಳಲ್ಲೇ ಕುಸಿದು ಬಿದ್ದರೆನ್ನಲಾಗಿದೆ.
ತಕ್ಷಣವೇ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ ಚೇತರಿಸಿಕೊಂಡಿದ್ದಾರೆ. ಆ ಬಳಿಕ ಸ್ಥಳದಲ್ಲಿದ್ದ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡಿದ ಸದಾನಂದ ಗೌಡ, ತಮ್ಮ ಕುಟುಂಬ ಸದಸ್ಯರೊಂದಿಗೂ ದೂರವಾಣಿಯಲ್ಲಿ ಮಾತನಾಡಿದ್ದಾರೆಂದು ತಿಳಿದುಬಂದಿದೆ. ಈಗ ಇನ್ನೂ ಹೆಚ್ಚಿನ ತಪಾಸಣೆಗಾಗಿ ಈಗ ಬೆಂಗಳೂರಿಗೆ ಸದಾನಂದ ಗೌಡರನ್ನು ಕಳಿಸಿಕೊಡಲಾಗಿದೆ.