ಕೊರೊನಾ ಕಾರಣಕ್ಕೆ ಕಳೆದ ಏಳು ತಿಂಗಳಿನಿಂದ ಬಂದ್ ಆಗಿದ್ದ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ತೋರಿಸಿದೆ. ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ.
ಉನ್ನತ ಶಿಕ್ಷಣ ಸಚಿವ ಅಶ್ವಥನಾರಾಯಣ, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ್ದಾರೆ.
ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ವಿಧದ ತರಗತಿಗಳನ್ನು ಆರಂಭಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಪದವಿ, ಇಂಜಿನಿಯರಿಂಗ್, ಡಿಪ್ಲೋಮಾ ಕಾಲೇಜುಗಳು ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇತರೆ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಕಡ್ಡಾಯವಾಗಿ ಬರಲೇಬೇಕೆಂಬ ಯಾವುದೇ ಒತ್ತಡವಿಲ್ಲವೆಂದು ಹೇಳಿದ ಸಚಿವ ಅಶ್ವಥನಾರಾಯಣ, ಆನ್ ಲೈನ್ ಅಥವಾ ಆಫ್ ಲೈನ್ ತರಗತಿಗಳಿಗೆ ಹಾಜರಾಗುವುದು ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಯುಜಿಸಿ ಮಾರ್ಗಸೂಚಿಯಂತೆ ಕಾಲೇಜುಗಳನ್ನು ಆರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯ ಕುರಿತಂತೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಅಲ್ಲದೇ ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.