ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಚಿವ ಸ್ಥಾನದಿಂದ ವಂಚಿತರಾದ ಶಾಸಕರು ಬಿಜೆಪಿ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ವಾರ್ನಿಂಗ್ ನೀಡಿದರೂ ಜಗ್ಗದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ವಿರುದ್ಧ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಸೇರಿ ಕಾಂಗ್ರೆಸ್ ನಾಯಕರನ್ನು ಕೂಡ ಖರೀದಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಯತ್ನಾಳ್, ಬ್ಲಾಕ್ ಮೇಲ್ ಮಾಡಿದವರಿಗೆ, ಹಣ ನೀಡಿದವರಿಗೆ, ಸಿಡಿ ತೋರಿಸಿ ಬೆದರಿಸಿದವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತಿದೆ. ಹಿಂದೆ ಪಕ್ಷಕ್ಕೆ ದುಡಿದವರ ಖೋಟಾ, ಸರ್ಕಾರ ರಚನೆಗೆ ಕಾರಣರಾದವರ ಖೋಟಾ, ಜಿಲ್ಲಾವಾರು ಖೋಟಾ ಎಂಬುದಿತ್ತು. ಆದರೆ ಈಗ ಹಾಗಿಲ್ಲ ಬ್ಲಾಕ್ ಮೇಲ್ ಖೋಟಾ, ಸಿಡಿ ಪ್ಲಸ್ ಹಣ ನೀಡಿದವರ ಖೋಟಾ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಹೊಸ ಬಾಂಬ್ ಒಂದನ್ನು ಯತ್ನಾಳ್ ಸಿಡಿಸಿದ್ದಾರೆ.
ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಕೂಡ ಖರೀದಿಸಿದ್ದಾರೆ. ಸಿದ್ದರಾಮಯ್ಯ, ಜಮೀರ್, ಡಿಕೆಶಿ, ಕೆ.ಜೆ ಜಾರ್ಜ್ ಕೂಡ ಬಿ ಎಸ್ ವೈ ಜತೆಗಿದ್ದಾರೆ. ಸಿಎಂ ಬಿ ಎಸ್ ವೈ, ವಿಜಯೇಂದ್ರ ಕಾಂಗ್ರೆಸ್ ನ ಈ ನಾಯಕರನ್ನೂ ಖರೀದಿ ಮಾಡಿದ್ದಾರೆ. ಈಗ ವಿಪಕ್ಷ ಎಂಬುದು ಇಲ್ಲ, ಕಾಂಗ್ರೆಸ್ ಸತ್ತು ಹೋಗಿದೆ. ವಿಪಕ್ಷ ಸಂಪೂರ್ಣ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದೆ ಎಂದು ಗುಡುಗಿದ್ದಾರೆ.