ಇಂದು ಮಧ್ಯಾಹ್ನ ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವ ಸಂಪುಟಕ್ಕೆ ಏಳು ಮಂದಿ ಸೇರ್ಪಡೆಗೊಳುತ್ತಿದ್ದು, ಖುದ್ದು ಯಡಿಯೂರಪ್ಪನವರೇ ನೂತನ ಸಚಿವರ ಹೆಸರುಗಳನ್ನು ಪ್ರಕಟಿಸಿದ್ದಾರೆ
ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್. ಶಂಕರ್, ಸಿ.ಪಿ. ಯೋಗಿಶ್ವರ್ ಹಾಗೂ ಎಸ್. ಅಂಗಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನೂತನ ಸಚಿವರುಗಳು ಮಧ್ಯಾಹ್ನ 3-30 ರ ಬಳಿಕ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆರ್.ಆರ್. ನಗರ ಕ್ಷೇತ್ರದಿಂದ ವಿಜೇತರಾಗಿದ್ದ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದವರಿಗೆಲ್ಲರಿಗೂ ಸಚಿವ ಸ್ಥಾನ ನೀಡಬಹುದೆಂದು ಹೇಳಲಾಗಿತ್ತಾದರೂ ಮುನಿರತ್ನಗೆ ಇಂದು ನಡೆಯುತ್ತಿರುವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವ ಅವಕಾಶ ಸಿಕ್ಕಿಲ್ಲ.
ಇನ್ನು ಅಬಕಾರಿ ಸಚಿವ ನಾಗೇಶ್ ಅವರ ರಾಜೀನಾಮೆ ಪಡೆಯಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಬಹುತೇಕ ನಾಳೆ ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆನ್ನಲಾಗಿದೆ.