ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗುತ್ತಿದೆ. ಮತ್ತೊಬ್ಬ ನಟಿ ಸಂಜನಾಗೆ ಮತ್ತೆ ಸಿಸಿಬಿ ಕಸ್ಟಡಿಗೆ ನೀಡುವ ಸಾಧ್ಯತೆಯಿದೆ.
ಇಂದು ವಿಡಿಯೋ ಕಾನ್‌ಫರೆನ್ಸ್ ಮೂಲಕ ರಾಗಿಣಿ, ಸಂಜನಾ ಸೇರಿದಂತೆ ಆರು ಮಂದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಈ ವೇಳೆ ಸಂಜನಾ ಹೊರತುಪಡಿಸಿ ಉಳಿದ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಯಿತು.
ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ದ ಬಳಿಕ ಜೈಲಿನ ನಿಯಾಮಾವಳಿಗಳಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿದೆ. ರಾಗಿಣಿ ಕಾರಾಗೃಹಕ್ಕೆ ಶಿಫ್ಟ್ ಆಗುತ್ತಿರುವ ಹಿನ್ನಲೆಯಲ್ಲಿ ಭದ್ರತೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದುವರೆಗೂ ಐಷಾರಾಮಿ ಜೀವನ ನಡೆಸುತ್ತಿದ್ದ ಈ ನಟಿ ಈಗ ಅನಿವಾರ್ಯವಾಗಿ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ವಿರುದ್ದ ಕಠಿಣ ಐಪಿಸಿ ಸೆಕ್ಷನ್ ದಾಖಲಾಗಿರುವುದರಿಂದ ಮುಂದಿನ ದಿನಗಳಲ್ಲೂ ಬೇಲ್ ಸಿಗುವುದು ಅನುಮಾನವೆಂದು ಹೇಳಲಾಗುತ್ತಿದೆ.