ಭೂಮಿ ಹುಣ್ಣಿಮೆಯನ್ನು ರೈತರು ಇಂದು ಸಡಗರ ಸಂಭ್ರಮದಿಂದ ತಮ್ಮ ತಮ್ಮ ಹೊಲ, ಗದ್ದೆ, ತೋಟಗಳಲ್ಲಿ ಆಚರಿಸುತ್ತಿದ್ದಾರೆ.
ಬೆಳಗ್ಗಿನಿಂದಲೇ ಪೂಜೆಯ ಸಡಗರದಲ್ಲಿದ್ದ ಮಹಿಳೆಯರು ಮನೆಯಲ್ಲಿ ವಿಶೇಷ ಅಡುಗೆ ತಿನಿಸುಗಳನ್ನು ಮಾಡಿಕೊಂಡು ಎತ್ತಿನ ಗಾಡಿ, ಟ್ರ್ಯಾಕ್ಟರ್ ಮುಂತಾದ ವಾಹನಗಳ ಮೂಲಕ ತಮ್ಮ ಜಮೀನುಗಳಿಗೆ ತೆರಳಿ ಅಡಿಕೆ ಮರ ಅಥವಾ ಇತರ ಮರಗಳಿಗೆ ಸೀರೆ, ಕುಪ್ಪಸ, ತಾಳಿ ತೊಡಿಸಿ, ಚಪ್ಪರ ಹಾಕಿ ವಿಶೇಷ ಅಲಂಕಾರ ಮಾಡಿ, ಶ್ರದ್ಧಾ ಭಕ್ತಿಯಿಂದ ಪೂಜಿಸಲು ಅಣಿಯಾಗುತ್ತಿದ್ದಾರೆ. .
ಭೂಮಿ ಹುಣ್ಣಿಮೆ ವಿಶೇಷ ಹಬ್ಬವಾಗಿದೆ. ರೈತ ಮಹಿಳೆಯರಿಗೆಲ್ಲಾ ತಮಗೆ ಅನ್ನ ನೀಡುವ, ಬದುಕು ಕೊಡುವ ಈ ಭೂಮಿಗೆ ಪೂಜೆ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಭಾವವಿದೆ. ಅಲ್ಲದೆ ಈ ಸಂದರ್ಭದಲ್ಲಿ ಗರ್ಭಿಣಿಯಾದ ಭೂಮಿ ತಾಯಿ ಬಯಕೆಯನ್ನ ತೀರಿಸಬೇಕು ಎಂಬ ನಂಬಿಕೆ ಕೂಡ ಇದೆ. ಹಲವು ಕಡೆ ಭೂಮಿ ಹುಣ್ಣಿಮೆಯನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸಿದರೂ ಕೂಡ ಒಟ್ಟಾರೆ ಆಶಯ ಒಂದೇ ಆಗಿದೆ.
ಮಲೆನಾಡು ಭಾಗಗಳಲ್ಲಿ ಈ ಆಚರಣೆ ಇನ್ನೂ ವಿಶೇಷವಾಗಿದೆ. ಒಂದು ವಾರದಿಂದಲೇ ಈ ಹಬ್ಬಕ್ಕೆ ಸಿದ್ದ ಮಾಡಿಕೊಂಡಿದ್ದು, ಪೂಜೆಯ ವಿಧಿವಿಧಾನ ಕೂಡ ಬೇರೆಯಾಗಿರುತ್ತದೆ. ಹಲವು ಕಡೆ ಭೂಮಿಯನ್ನು ಅಗೆದು ಎಡೆಯನ್ನು ಇಟ್ಟು, ಮುಚ್ಚಿ ಭೂ ಮಾತೆಗೆ ಉಣಬಡಿಸಿದ ತೃಪ್ತಿ ಪಡೆಯುತ್ತಾರೆ.