ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.) ಮತ್ತು ಸರ್ಕಾರದ ನಡುವಿನ ತಿಕ್ಕಾಟದ ಕಾರಣ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಸಿಗದಂತಾಗಿದೆ. ಮೂರು ವರ್ಷದಿಂದ ಪ್ರಮಾಣಪತ್ರ ಸಿಕ್ಕಿಲ್ಲ. ಅಂಚೆ ಇಲಾಖೆಯ ಬಾಂಡ್ ಕೂಡ ಇಲ್ಲದೆ ಸುಮಾರು 4ಲಕ್ಷ ಹೆಣ್ಣುಮಕ್ಕಳು ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗಿದೆ.
2018 -19 ನೇ ಸಾಲಿನಲ್ಲಿ ಯೋಜನೆಗೆ 3 ಲಕ್ಷ ಹೆಣ್ಣುಮಕ್ಕಳ ನೋಂದಣಿಯಾಗಿದ್ದು ಇದುವರೆಗೂ ಭಾಗ್ಯಲಕ್ಷ್ಮಿ ಬಾಂಡ್ ನೀಡಲಾಗಿಲ್ಲ. 2020 ನೇ ಸಾಲಿನಿಂದ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ಬದಲಿಗೆ ಅಂಚೆ ಇಲಾಖೆ ವ್ಯಾಪ್ತಿಗೆ ಯೋಜನೆ ತರಲು ತೀರ್ಮಾನಿಸಲಾಗಿದೆ.
ಈ ಕುರಿತಂತೆ ಅಂಚೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡುವೆ ಒಪ್ಪಂದವಾಗಿದ್ದರೂ ಯೋಜನೆ ಅನುಷ್ಠಾನವಾಗಿಲ್ಲ. 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆ ಆರಂಭಿಸಿದ್ದರು. ಹೆಣ್ಣುಮಕ್ಕಳ ಹೆಸರಲ್ಲಿ ಸರ್ಕಾರದಿಂದ ನಿರ್ದಿಷ್ಟ ಮೊತ್ತವನ್ನು ಠೇವಣಿಯಾಗಿ ನೀಡಲಿದ್ದು 18 ವರ್ಷ ತುಂಬಿದ ನಂತರ 1 ಲಕ್ಷ ರೂ. ನೀಡಲಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಯೋಜನೆ ಕುಂಠಿತವಾಗಿದೆ. ಠೇವಣಿ ಮೇಲಿನ ಬಡ್ಡಿದರ ಕಡಿಮೆಯಾಗುತ್ತಿರುವುದರಿಂದ ಎಲ್ಐಸಿ ಎರಡು ವರ್ಷದಿಂದ ಬಾಂಡ್ ವಿತರಿಸಿಲ್ಲ ಎನ್ನಲಾಗಿದೆ. 2020ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿ ಬಾಂಡ್ ನೀಡಲು ನಿರ್ಧರಿಸಿದರೂ ಯೋಜನೆ ಅನುಷ್ಠಾನವಾಗಿಲ್ಲ. ತಾಂತ್ರಿಕ ಕಾರಣದಿಂದ ವಿತರಣೆ ವಿಳಂಬವಾಗಿದ್ದು ಶೀಘ್ರವೇ ಬಾಂಡ್ ವಿತರಿಸಲಾಗುವುದು. ಪ್ರಸಕ್ತಯ ವರ್ಷದಲ್ಲಿ ನೋಂದಣಿ ಮಾಡಿಸಿದವರಿಗೆ ಸುಕನ್ಯಾ ಸಮೃದ್ಧಿಯೋಜನೆಯಡಿ ಬಾಂಡ್ ನೀಡಲಾಗುವುದು. ಹಿಂದಿನ ವರ್ಷದವರೆಗೂ ನೋಂದಣಿ ಮಾಡಿಸಿದವರಿಗೆ ಎಲ್ಐಸಿ ವತಿಯಿಂದ ಬಾಂಡ್ ನೀಡಲಾಗುವುದು ಎಂದು ಹೇಳಲಾಗಿದೆ.