ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಪ್ರಾಣಿಗಳೂ ಸ್ವಾತಂತ್ರ್ಯ ದಿನದ ಸವಿಯುಂಡವು. ಪೌಷ್ಟಿಕಾಂಶವುಳ್ಳ ಆಹಾರ ನೀಡುವ ಪರಿಕಲ್ಪನೆಯೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಾರ್ಯಕಾರಿ ನಿರ್ದೇಶಕಿ ವನಶ್ರೀ ಬಿಪಿನ್ ಸಿಂಗ್, ವಿಶೇಷವಾಗಿ ಸ್ವಾತಂತ್ರ್ಯ ದಿನ ಆಚರಿಸುವುದರ ಜೊತೆಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪರಿಕಲ್ಪನೆ ಅನ್ವಯ ಮಾಡಲಾಯಿತು ಎಂದಿದ್ದಾರೆ.
ರಾಷ್ಟ್ರಧ್ವಜದಲ್ಲಿನ ತ್ರಿವರ್ಣಗಳನ್ನೇ ಹೋಲುವ ಹಸಿರು ಸೊಪ್ಪು, ಬಿಳಿಯ ಎಲೆಕೋಸು, ಕೇಸರಿ ಬಣ್ಣದ ಜಾಗದಲ್ಲಿ ಕ್ಯಾರೆಟ್ ಜೋಡಿಸಿಡಲಾಗಿತ್ತು. ಅಶೋಕ ಚಕ್ರದ ಸ್ಥಾನದಲ್ಲಿ ನೀಲಿ ದ್ರಾಕ್ಷಿಗಳನ್ನು ಜೋಡಿಸಲಾಯಿತು. ಒಟ್ಟಾರೆ ಪೌಷ್ಟಿಕಯುಕ್ತ ತರಕಾರಿ ಬಳಸಿ ರಾಷ್ಟ್ರಧ್ವಜದ ಮಾದರಿ ಸೃಷ್ಟಿಸಲಾಗಿತ್ತು.
ಆಮೆ, ನವಿಲು, ಕೋತಿಗಳಿಗೆ ಈ ಸೊಪ್ಪು ತರಕಾರಿಗಳನ್ನು ನೀಡಲಾಯಿತು. ಆಮೆಗಳು ಕ್ಯಾರೆಟ್ ಹಾಗೂ ದ್ರಾಕ್ಷಿಯನ್ನೇ ಹಬ್ಬದೂಟ ಅಂದುಕೊಂಡರೆ, ನವಿಲುಗಳೂ ದ್ರಾಕ್ಷಿಗೆ ಬಾಯಿ ಹಾಕಿದವು. ಕೋತಿಗಳು ಮಾತ್ರ ಆಹಾರ ಕಿತ್ತಸೆಯುವುದರಲ್ಲೇ ಮಗ್ನವಾಗಿದ್ದವು. ಇದು ನೋಡುಗರನ್ನು ಸೆಳೆಯಿತು. ಮಕ್ಕಳಿಗೆ ಸ್ಥಳದಲ್ಲಿಯೇ ವನ್ಯಜೀವಿ ಜಾಗೃತಿ ಮೂಡಿಸಲು ರಸಪ್ರಶ್ನೆ ಸ್ಪರ್ಧೆ ಸಹ ನಡೆಸಲಾಯಿತು.
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಡಿ.ಎಚ್. ವಘೇಲ ದಂಪತಿ ಕೂಡ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಚಿಟ್ಟೆ ಉದ್ಯಾನದಲ್ಲಿ ಚಿಟ್ಟೆಗಳನ್ನು ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಲಾಕ್ ಡೌನ್ ನಿಂದಾಗಿ ಬಂದ್ ಆಗಿದ್ದ ಉದ್ಯಾನ ತೆರೆದಿದ್ದರೂ ಜನರು ಬಂದೇ ಇರಲಿಲ್ಲ. ಸ್ವತಂತ್ರ ದಿನದಂದು 1,806 ಮಂದಿ ಭೇಟಿ ನೀಡಿದ್ದಾಗಿ ವನಶ್ರೀ ಮಾಹಿತಿ ನೀಡಿದ್ದಾರೆ.