ವಿವಿಧ ಪ್ರಮುಖ ನಗರಗಳಲ್ಲಿ ಅನೇಕ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬೆಂಗಳೂರಿನ ಮಾಜಿ ಆರ್ಕೆಸ್ಟ್ರಾ ಬಾರ್ ಗಾಯಕಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುನ್ಮುನ್ ಹುಸೇನ್ ಅಥವಾ ಅರ್ಚನಾ ಬರುವಾ ಎಂಬ ಮಹಿಳೆಯನ್ನ ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕೊಲ್ಕತ್ತಾದವಳಾದ 46 ವರ್ಷದ ಅರ್ಚನಾ ಕಳೆದ ಅನೇಕ ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿದ್ದಳು ಎನ್ನಲಾಗಿದೆ. ಈಕೆಯ ವಿರುದ್ಧ ದೇಶದ ಹಲವೆಡೆ ಕಳ್ಳತನದ ಪ್ರಕರಣಗಳು ದಾಖಲಾಗಿವೆ.
ಅಂದ ಹಾಗೆ ಈಕೆ ಕಳ್ಳತನ ಮಾಡಬೇಕು ಅಂತಾನೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಳಂತೆ. ಶ್ರೀಮಂತ ವ್ಯಕ್ತಿಗಳು ಹೆಚ್ಚಾಗಿ ಕಾಣಸಿಗುವ ಮಾಲ್ ಹಾಗೂ ವಿಮಾನ ನಿಲ್ದಾಣಗಳೇ ಈಕೆಯ ಟಾರ್ಗೆಟ್ ಪ್ಲೇಸ್. ಒಮ್ಮೆ ತನ್ನ ಕಳ್ಳತನದಲ್ಲಿ ಯಶಸ್ವಿಯಾದರೆ ಸಂಜೆಯ ವೇಳೆಗೆ ಈಕೆ ಬೆಂಗಳೂರಿಗೆ ಕಳ್ಳತನದ ಮಾಲಿನ ಸಮೇತ ಹಿಂತಿರುಗುತ್ತಿದ್ದಳು ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚ್ಚೇದನ ಪಡೆದಿದ್ದ ಅರ್ಚನಾ ಆರ್ಕೆಸ್ಟ್ರಾ ಗಾಯಕಿ ಕೆಲಸವನ್ನೂ ಕಳೆದುಕೊಂಡ ಬಳಿಕ ಅಂದರೆ 2009ರಿಂದ ಈ ಕಳ್ಳತನದ ಕೆಲಸಕ್ಕೆ ಇಳಿದಿದ್ದಳು ಎನ್ನಲಾಗಿದೆ. ಝಾರಾ ಶೋ ರೂಂನಿಂದ ಮಹಿಳೆಯ ಕೈಚೀಲವನ್ನ ಈಕೆ 2019ರಲ್ಲಿ ಕದ್ದಿದ್ದಳು. ಈ ಪ್ರಕರಣದ ತನಿಖೆ ನಡೆಸಿದ ಮುಂಬೈ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಈಕೆಯನ್ನ ಜೈಲಿಗಟ್ಟಿದ್ದಾರೆ.