ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ವೇಳೆ ಸಹೋದರತ್ವ ಸಾರುವ ಮೂಲಕ ಮುಸ್ಲಿಂ ಯುವಕರು ಗಮನಸೆಳೆದಿದ್ದಾರೆ.
ಠಾಣೆ ಮೇಲೆ ದಾಳಿ ಮಾಡಿ ವಾಹನಗಳು, ಶಾಸಕರ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಗಲಭೆ ಕೃತ್ಯದಲ್ಲಿ ಭಾಗಿಯಾಗಿದ್ದ ವೇಳೆಯಲ್ಲೇ ಆಂಜನೇಯ ದೇವಾಲಯದ ಸುತ್ತಲೂ ಮುಸ್ಲಿಂ ಯುವಕರ ತಂಡವೊಂದು ಮಾನವ ಸರಪಳಿ ರಚಿಸಿ ರಕ್ಷಣೆಗೆ ನಿಂತಿದೆ.
ನಮ್ಮ ಏರಿಯಾದಲ್ಲಿ ಎಲ್ಲ ಧರ್ಮದವರು ಸಹೋದರರಂತೆ ಇದ್ದೇವೆ. ಇದುವರೆಗೂ ಯಾವುದೇ ಅನಾಹುತವಾಗಿಲ್ಲ. ಅದಕ್ಕೆ ನಾವು ಅವಕಾಶ ನೀಡಿಲ್ಲ. ಕೆಲವರು ಬೈಕ್ ಗಳಲ್ಲಿ ದೇವಾಲಯದತ್ತ ಬರುತ್ತಿರುವುದು ಕಂಡು ಬಂದಿತು. ದುಷ್ಕರ್ಮಿಗಳು ದೇವಾಲಯಕ್ಕೆ ಬರಬಹುದು ಎಂಬ ಆತಂಕದಿಂದ ಮಾನವ ಸರಪಳಿ ರಚಿಸಿಕೊಂಡು ಯಾರು ದೇಗುಲದತ್ತ ಸುಳಿಯದಂತೆ ಅಡ್ಡಲಾಗಿ ನಿಂತೆವು ಎಂದು ಯುವಕರು ಹೇಳಿದ್ದಾರೆ.
ಇನ್ನು ಕಾವಲ್ ಬೈರಸಂದ್ರದ ಹಲವೆಡೆ ದುಷ್ಕರ್ಮಿಗಳು ದಾಳಿ ಮಾಡಿದಾಗ ನೆರೆಹೊರೆಯವರು ರಕ್ಷಣೆ ನೀಡಿದ್ದಾರೆ. ಯುವಕರ ಮಾದರಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎನ್ನಲಾಗಿದೆ.