ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ವೈಯಕ್ತಿಕ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಕೆಲವು ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿರುವುದಾಗಿ ದೂರಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ಕೆಲವು ವಿದ್ಯಾರ್ಥಿನಿಯರ ಫೋಟೋಗಳು ಅಶ್ಲೀಲ ಸೈಟ್ ನಲ್ಲಿ ಕಂಡುಬಂದಿವೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಕ್ರೀನ್ ಶಾಟ್ ಗಳನ್ನು ವಾಟ್ಸಾಪ್ ನಲ್ಲಿ ಹಂಚಿಕೊಳ್ಳಲಾಗಿದೆ. ಕಾಲೇಜಿನ ವಿದ್ಯಾರ್ಥಿಯೊಬ್ಬ ಈ ರೀತಿ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಒಂದಿಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಯೊಬ್ಬ ನಕಲಿ ಖಾತೆ ಸೃಷ್ಟಿಸಿ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿದ್ಯಾರ್ಥಿನಿಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡಿದ್ದಾನೆ ಎಂದು ಹೇಳಲಾಗಿದೆ.