ಬೆಂಗಳೂರು: ಮಹಾನಗರದಲ್ಲಿ ಮರಗಳಿಗೆ ಅಳವಡಿಸಿದ ಫಲಕ, ಮೊಳೆ ಹಾಗೂ ಪೋಸ್ಟರ್ ಗಳನ್ನು ಬೆಂಗಳೂರಿನ ವಿಜ್ಞಾನಿಯೊಬ್ಬರು ತಮ್ಮ ಸ್ನೇಹಿತರೊಡಗೂಡಿ ಖಾಲಿ ಮಾಡುತ್ತಿದ್ದಾರೆ.
ಡಿಫೆನ್ಸ್ ರೀಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ (ಡಿ.ಆರ್. ಡಿ.ಒ.)ನ ಸಹಾಯಕ ವಿಜ್ಞಾನಿ ವಿನೋದ್ ಕರ್ತವ್ಯ ಎಂಬುವವರು ತಮ್ಮ ಸ್ನೇಹಿತರ ಜತೆಗೂಡಿ ಕಳೆದ 15 ದಿನಗಳಿಂದ ಈ ಕಾರ್ಯ ಮಾಡುತ್ತಿದ್ದಾರೆ.
ವಿನೋದ್ ಮೊದಲ ದಿನ ವಿಠ್ಠಲ ಮಲ್ಯ ರಸ್ತೆಯ 10 ಮರಗಳಿಗೆ ಹೊಡೆದಿದ್ದ 40 ಫಲಕ, 500 ಮೊಳೆ ಹಾಗೂ ಪೋಸ್ಟರ್ ಗಳನ್ನು ತೆಗೆದಿದ್ದರು. ಎರಡನೇ ವಾರ ಅವರ ಸ್ನೇಹಿತರ ಜತೆ ಸೇರಿ 40 ಮರಗಳಿಗೆ ಹೊಡೆದಿದ್ದ ಪೋಸ್ಟರ್ ಗಳನ್ನು ತೆಗೆದು ಹಾಕಿದ್ದಾರೆ.
ವಿನೋದ್ ಅವರು ಒಂದು ದಿನ ಬೈಕ್ ನಲ್ಲಿ ಹೋಗುವಾಗ ಮರಕ್ಕೆ ಅಳವಡಿಸಿದ್ದ ಜಾಹೀರಾತು ಫಲಕವೊಂದು ಕಿತ್ತು ಅವರ ತಲೆಗೆ ಹೊಡೆಯಿತು. ಇದರಿಂದ ಅವರು ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಇಂಥ ಪರಿಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂಬ ಕಾರಣದಿಂದ ವಿನೋದ್ ಅವರು ಸ್ವಯಂಪ್ರೇರಿತರಾಗಿ ಈ ಕಾರ್ಯ ಪ್ರಾರಂಭಿಸಿದ್ದಾರೆ.